– ಐಸಿಯು ಬೀಗ ಮುರಿದು ಚಿಕಿತ್ಸೆ
ಭೋಪಾಲ್: ಸರಿಯಾದ ಸಮಯಕ್ಕೆ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕ (ಐಸಿಯು) ಕೀ ಸಿಗದೇ ಹೋಗಿದ್ದಕ್ಕೆ ವೃದ್ಧೆಯೊಬ್ಬರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ.
ಉಸಿರಾಟದ ತೊಂದರೆ ಮತ್ತು ಅಧಿಕ ರಕ್ತದೊತ್ತಡದಿಂದ ವೃದ್ಧೆಯನ್ನು ಗುರುವಾರ ರಾತ್ರಿ ಉಜ್ಜಯಿನಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ಆರೋಗ್ಯದ ಸ್ಥಿತಿ ಹದಗೆಟ್ಟಿದ್ದರಿಂದ ಅಲ್ಲಿನ ವೈದ್ಯರು ಆಕೆಯ ಕೊರೊನಾ ಪರೀಕ್ಷೆಗೆ ಮಾದರಿಯನ್ನು ತೆಗೆದುಕೊಂಡ ನಂತರ ಮಾಧವ್ ನಗರದ ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ಧರಿಸಿದ್ದಾರೆ.
ಆಕೆಯನ್ನು ಅಲ್ಲಿನಿಂದ ಆರ್.ಡಿ ಗಾರ್ಡಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಉತ್ತಮ ಸೌಲಭ್ಯಗಳನ್ನು ಹೊಂದಿದೆ ಎಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. 55 ವರ್ಷ ವಯಸ್ಸಿನ ವೃದ್ಧೆಯನ್ನು ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಆ ಆಸ್ಪತ್ರೆಯ ತೀವ್ರ ನಿಗಾ ಘಟಕ (ಐಸಿಯು) ಲಾಕ್ ಆಗಿದ್ದು, ಅದಕ್ಕೆ ಸಂಬಂಧಪಟ್ಟ ಸಿಬ್ಬಂದಿ ಕೂಡ ಆಸ್ಪತ್ರೆಯಲ್ಲಿ ಇರಲಿಲ್ಲ.
ಅಲ್ಲಿದ್ದ ಆಸ್ಪತ್ರೆ ಸಿಬ್ಬಂದಿ ಕೀಯನ್ನು ಹುಡುಕಿದ್ದಾರೆ ಆದರೆ ಸಿಕ್ಕಿಲ್ಲ. ಹಾಗಾಗಿ ಐಸಿಯುನ ಬೀಗ ಮುರಿಯಲಾಗಿದೆ. ಬೀಗ ಮುರಿಯಲು ತಡವಾದ ಕಾರಣ ರೋಗಿಯ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಬೀಗ ಮುರಿದ ನಂತರ ಆಕೆಯನ್ನು ಐಸಿಯುಗೆ ಸ್ಥಳಾಂತರಿಸಿ ವೈದ್ಯರ ಸತತ ಪ್ರಯತ್ನಗಳ ಹೊರತಾಗಿಯೂ ವೃದ್ಧೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಜ್ಜಯಿನಿ ಮುಖ್ಯ ವೈದ್ಯಾಧಿಕಾರಿ ಅನುಸುಯಾ ಗವ್ಲಿ ಅವರು, ವೃದ್ಧೆ ಅಧಿಕ ರಕ್ತದೊತ್ತಡ, ಮಧುಮೇಹ ಮುಂತಾದ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿದ್ದರು. ನಮ್ಮ ತಜ್ಞರು ಕೊರೊನಾ ಪರೀಕ್ಷೆಗಾಗಿ ಮಾದರಿಗಳನ್ನು ತೆಗೆದುಕೊಂಡಿದ್ದಾರೆ. ನಂತರ ಅವರನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಆದರೆ ಆರೋಗ್ಯದ ಸ್ಥಿತಿ ಹದಗೆಟ್ಟಿದ್ದ ಕಾರಣ ವೃದ್ಧೆ ನಿಧನರಾಗಿದ್ದಾರೆ. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.