ಭೋಪಾಲ್: ಕೊರೊನಾ ವಿರುದ್ಧ ಹೋರಾಡುತ್ತಿರುವ 94 ಆರೋಗ್ಯಾಧಿಕಾರಿಗಳಿಗೆ ಕೊರೊನಾ ಪಾಸಿಟಿವ್ ಬಂದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ತಮ್ಮ ಜೀವನದ ಹಂಗು ತೊರೆದು ಕೊರೊನಾ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಅಧಿಕಾರಿ ಮತ್ತು ಸಿಬ್ಬಂದಿಗೂ ಕೊರೊನಾ ಮಹಾಮಾರಿ ಕಾಡುತ್ತಿದೆ. ಭೋಪಾಲ್‍ನಲ್ಲಿ ಈವರೆಗೂ 94 ಆರೋಗ್ಯಾಧಿಕಾರಿಳು ಮತ್ತು ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಸುಮಾರು 166 ಪ್ರಕರಣಗಳು ವರದಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆರೋಗ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಐಎಎಸ್ ಅಧಿಕಾರಿಯೊಬ್ಬರಿಗೆ ಕಳೆದ ಮಂಗಳವಾರ ಕೊರೊನಾ ಪಾಸಿಟಿವ್ ಬಂದಿತ್ತು. ಆರೋಗ್ಯ ಇಲಾಖೆ ಮೊದಲ ಪ್ರಕರಣ ಏಪ್ರಿಲ್ 2ರಂದು ಬೆಳಕಿಗೆ ಬಂದಿತ್ತು. ರಾಷ್ಟ್ರೀಯ ಆರೋಗ್ಯ ಮಿಷನ್‍ನ ವ್ಯವಸ್ಥಾಪಕ ನಿರ್ದೇಶಕರು ಮೊದಲಿಗೆ ಕೊರೊನಾ ವೈರಸ್‍ಗೆ ತುತ್ತಾಗಿದ್ದರು. ಇದಾದ ಎರಡು ದಿನಗಳ ನಂತರ ಮತ್ತೊಬ್ಬ ಐಎಎಸ್ ಅಧಿಕಾರಿ ವೈರಸ್‍ಗೆ ತುತ್ತಾಗಿದ್ದರು.
ಮಧ್ಯಪ್ರದೇಶದ ಅರೋಗ್ಯ ಇಲಾಖೆಯ ವಿದೇಶದಿಂದ ಮರಳಿದ ಇಬ್ಬರು ಹೆಚ್ಚುವರಿ ನಿರ್ದೇಶಕರಿಗೂ ಕೊರೊನಾ ಪಾಸಿಟಿವ್ ಬಂದಿದೆ. ಇದರ ಜೊತಗೆ ಮಗನ ಯುಎಸ್ ಪ್ರವಾಸದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದೆ ಬಚ್ಚಿಟ್ಟಿದ್ದ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೂ ಕೂಡ ಕೊರೊನಾ ಪರೀಕ್ಷೆ ಮಾಡಿದಾಗ ವರದಿಯಲ್ಲಿ ಪಾಸಿಟಿವ್ ಬಂದಿದೆ. ಈ ಎಲ್ಲರನ್ನೂ ಸೇರಿ ಸುಮಾರು 94 ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಕೊರೊನಾ ಸೋಂಕು ತಗುಲಿದೆ.
ಆರೋಗ್ಯ ಇಲಾಖೆ ಬುಧವಾರ ಬಿಡುಗಡೆ ಮಾಡಿದ ಬುಲೆಟಿನ್ ಪ್ರಕಾರ, ಮಧ್ಯಪ್ರದೇಶದಲ್ಲಿ ಮಂಗಳವಾರ ಒಂದೇ ದಿನ 197 ಹೊಸ ಪ್ರಕರಣಗಳನ್ನು ವರದಿಯಾಗಿವೆ. ಈ ಮೂಲಕ ಮಧ್ಯಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 938 ಕ್ಕೆ ಏರಿಕೆಯಾಗಿದೆ. ಇದರಲ್ಲಿ ಬರೋಬ್ಬರಿ 544 ಪ್ರಕರಣಗಳು ಇಂದೋರ್ ನಗರದಲ್ಲಿ ಪತ್ತೆಯಾಗಿವೆ. ಈ ಮೂಲಕ ರಾಜ್ಯದ ಒಟ್ಟು ಪ್ರಕರಣಗಳಲ್ಲಿ ಸುಮಾರು 58% ಸೋಂಕಿತರು ಈ ಪ್ರದೇಶದಲ್ಲೇ ಇದ್ದಾರೆ.
ಈ ವಿಚಾರವಾಗಿ ಮಾತನಾಡಿರುವ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಸುಲೇಮಾನ್ ಅವರು, ಮಧ್ಯಪ್ರದೇಶದಲ್ಲಿ ಮುಂದಿನ ದಿನಗಳಲ್ಲಿ ಕೊರೊನಾ ಪರೀಕ್ಷೆಗಳ ಹೆಚ್ಚಿನ ಸಂಖ್ಯೆಯಲ್ಲಿ ಮಾಡಲು ತೀರ್ಮಾನ ಮಾಡಿದ್ದೇವೆ. ನಮ್ಮ ದೇಶದಲ್ಲೇ ಕಡಿಮೆ ದರದಲ್ಲಿ ಕೊರೊನಾ ಪರೀಕ್ಷೆಯನ್ನು ಮಾಡಲು ನಿರ್ಧಾರ ಮಡಿದ್ದೇವೆ ಎಂದು ತಿಳಿಸಿದ್ದಾರೆ.