– ಡಿಜಿ ಭೇಟಿಯಾದರೂ ಪ್ರಯೋಜನವಾಗಲಿಲ್ಲ
– ವೈಯಕ್ತಿಕ ನಿರ್ಧಾರ ಎಂದು ಅರ್ಜಿ ವಜಾ ಮಾಡಿದ ಹೈ ಕೋರ್ಟ್
ಬೆಂಗಳೂರು: ಮಧ್ಯ ಪ್ರದೇಶದ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಲು ಅವಕಾಶ ನೀಡಬೇಕು ಎಂದು ಮಧ್ಯ ಪ್ರದೇಶದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಇಂದು ಬೆಂಗಳೂರಿನ ಯಲಹಂಕದ ಖಾಸಗಿ ರೆಸಾರ್ಟ್ ಬಳಿ ಪ್ರತಿಭಟನೆ ನಡೆಸಿದರು.
ಯಲಹಂಕದ ಖಾಸಗಿ ಹೋಟೆಲ್ ಬಳಿ ದಿಗ್ವಿಜಯ್ ಸಿಂಗ್ ಧಾವಿಸುತ್ತಿದ್ದಂತೆ ಶಾಸಕರ ಭೇಟಿಗೆ ಅವಕಾಶ ಕೇಳಿದರು. ಆದರೆ ಪೊಲೀಸರು ಶಾಸಕರ ಭೇಟಿಗೆ ಅವಕಾಶ ನೀಡಲಿಲ್ಲ. ಇದರಿಂದ ಬೇಸತ್ತ ದಿಗ್ವಿಜಯ್ ಸಿಂಗ್ ರೆಸಾರ್ಟ್ ಮುಂಭಾಗದಲ್ಲಿ ಪ್ರತಿಭಟನೆಗೆ ಮುಂದಾದರು. ಈ ವೇಳೆ ಅಮೃತಹಳ್ಳಿ ಪೊಲೀಸರು ದಿಗ್ವಿಜಯ್ ಸಿಂಗ್ ಮತ್ತು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಲ್ಲ ಕಾಂಗ್ರೆಸ್ ನಾಯಕರನ್ನು ವಶಕ್ಕೆ ಪಡೆದರು.
Advertisement
Advertisement
ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ನಿಯೋಜಿತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪೊಲೀಸರ ಕ್ರಮವನ್ನು ಖಂಡಿಸಿದರು. ನಂತರ ದಿಗ್ವಿಜಯ್ ಸಿಂಗ್ ಅವರನ್ನು ಬೆಂಗಳೂರು ನಗರ ಪೊಲೀಸರ ಕಚೇರಿಗೆ ಕರೆದುಕೊಂಡು ಹೋಗಿ ರೆಸಾರ್ಟ್‍ನಲ್ಲಿರುವ ಶಾಸಕರ ಭೇಟಿಗೆ ಅವಕಾಶ ನೀಡುವಂತೆ ಮನವಿ ಮಾಡಿದರು. ಅಲ್ಲೂ ಕೂಡ ಭೇಟಿಗೆ ಅವಕಾಶ ನೀಡಲು ನಿರಾಕರಿಸಲಾಯಿತು.
Advertisement
Advertisement
ನಂತರ ಡಿಜಿ ಪ್ರವೀಣ್ ಸೂದ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದರು. ಹೈಕೋರ್ಟ್ ಸಹ ಭೇಟಿಗೆ ಅವಕಾಶ ನೀಡಲು ಸಾಧ್ಯವಿಲ್ಲ. ಅದು ಅವರ ಖಾಸಗಿ ನಿರ್ಧಾರ ಎಂದು ಅರ್ಜಿ ವಜಾಗೊಳಿಸಿತು. ಬಿಜೆಪಿ ಸರ್ಕಾರ ಮತ್ತು ನಗರ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನಾಯಕರು, ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮರಳಿದರು.