ಮಧ್ಯಪ್ರದೇಶ ಸರ್ಕಾರದ ಮೊದಲ ವಿಕೆಟ್ ಪತನ- ರಾಜೀನಾಮೆ ಸಲ್ಲಿಸಿದ ‘ಕೈ’ ಶಾಸಕ

Public TV
2 Min Read
MP MLAs

ಭೋಪಾಲ್: ಮಧ್ಯಪ್ರದೇಶದ ಸರ್ಕಾರದ ಮೊದಲ ವಿಕೆಟ್ ಪತನವಾಗಿದ್ದು, ಕಾಂಗ್ರೆಸ್‍ನ ಶಾಸಕ ಹರ್ದೀಪ್ ಸಿಂಗ್ ತಮ್ಮ ರಾಜೀನಾಮೆ ಪತ್ರವನ್ನು ಸ್ಪೀಕರ್ ಪ್ರಜಾಪತಿ ಅವರಿಗೆ ನೀಡಿದ್ದಾರೆ.

ಕರ್ನಾಟಕದಲ್ಲಿರುವ ಹರ್ದೀಪ್ ಸಿಂಗ್ ಅವರು ಸ್ಪೀಕರ್ ಅವರಿಗೆ ಪತ್ರ ಬರೆದಿದ್ದಾರೆ. ‘ಎರಡನೇ ಬಾರಿ ಜನರಿಂದ ಆಯ್ಕೆಯಾದರೂ ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ. ಪ್ರತಿಯೊಬ್ಬ ಸಚಿವರೂ ತಾವು ಭ್ರಷ್ಟಾಚಾರದ ಭಾಗವಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಆಪರೇಷನ್ ಮಧ್ಯಪ್ರದೇಶಕ್ಕೆ ಕರ್ನಾಟಕವೇ ಹೆಡ್ ಆಫೀಸ್

kamalnath

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಹಿರಿಯ ಮುಖಂಡ ರಣದೀಪ್ ಸಿಂಗ್ ಸುರ್ಜೆವಾಲಾ ಅವರು, ’14 ಶಾಸಕರನ್ನು ತನ್ನ ಕಡೆ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. 15 ವರ್ಷಗಳಿಂದ ನಡೆಯುತ್ತಿದ್ದ ಲ್ಯಾಂಡ್ ಮಾಫಿಯಾ, ಚಿಟ್ ಫಂಡ್ ಮಾಫಿಯಾ, ಸುಲಿಗೆ ಮಾಫಿಯಾಗಳನ್ನು ಕಾಂಗ್ರೆಸ್ ಸರ್ಕಾರವು ನಿಲ್ಲಿಸಿದೆ. ಹೀಗಾಗಿ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪಿತೂರಿ ನಡೆಸಿದೆ ಎಂದು ಆರೋಪಿಸಿದ್ದಾರೆ.

ಮಧ್ಯಪ್ರದೇಶ ಬಿಜೆಪಿ ಆಪರೇಷನ್‍ಗೆ ಒಳಗಾದ ಒಟ್ಟು 10 ಕಾಂಗ್ರೆಸ್ ಶಾಸಕರಲ್ಲಿ ಹರ್ದೀಪ್ ಸಿಂಗ್ ಕೂಡ ಒಬ್ಬರಾಗಿದ್ದಾರೆ. 12 ಮಂದಿ ಶಾಸಕರನ್ನು ಸೆಳೆದಿರುವ ಬಿಜೆಪಿ, 8 ಮಂದಿ ಶಾಸಕರು ದೆಹಲಿಗೆ ಶಿಫ್ಟ್ ಮಾಡಿದ್ದರೆ, ಮಂಗಳವಾರ ರಾತ್ರೋರಾತ್ರಿ 4 ಮಂದಿ ಶಾಸಕರು ಕರ್ನಾಟಕಕ್ಕೆ ಶಿಫ್ಟ್ ಆಗಿದ್ದರು ಎಂದು ಮೂಲಗಳಿಂದ ಮಾಹಿತಿ ಲಭಿಸಿತ್ತು.

ಬಿಜೆಪಿಯ ರಾಂಪಾಲ್ ಸಿಂಗ್, ನರೋತ್ತಮ್ ಮಿಶ್ರಾ, ಅರವಿಂದ ಬದೌರಿಯಾ ಮತ್ತು ಸಂಜಯ್ ಪಾಠಕ್ ಶಾಸಕರಿಗೆ ಹಣ ನೀಡಿದ್ದಾರೆ. ಈ ಎಲ್ಲ ಶಾಸಕರು ಕಾಂಗ್ರೆಸ್ಸಿಗೆ ಮರಳಲಿದ್ದಾರೆ ಎಂದು ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದರು. ಮುಖ್ಯಮಂತ್ರಿ ಕಮಲನಾಥ್ ಪ್ರತಿಕ್ರಿಯಿಸಿ, ನಮ್ಮ ಸರ್ಕಾರಕ್ಕೆ ಏನು ಆಗುವುದಿಲ್ಲ. ಎಲ್ಲ ಶಾಸಕರು ವಾಪಸ್ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ಒಟ್ಟು 230 ವಿಧಾನಸಭಾ ಕ್ಷೇತ್ರಗಳಿರುವ ಮಧ್ಯಪ್ರದೇಶದಲ್ಲಿ 2018ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 114, ಬಿಜೆಪಿ 109, ಪಕ್ಷೇತರ 1, ಬಿಎಸ್‍ಪಿ 2, ಎಸ್‍ಪಿ 2 ಕ್ಷೇತ್ರದಲ್ಲಿ ಜಯಗಳಿಸಿದೆ. 2019ರ ಲೋಕಸಭಾ ಚುನಾವಣೆಯ ಒಟ್ಟು 29 ಕ್ಷೇತ್ರಗಳ ಪೈಕಿ ಬಿಜೆಪಿ 28 ರಲ್ಲಿ ಗೆದ್ದಿದ್ದರೆ 1 ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಗಳಿಸಿತ್ತು. ಚಿಂದ್ವಾರಾ ಕ್ಷೇತ್ರದಿಂದ ಸಿಎಂ ಕಮಲ್‍ನಾಥ್ ಪುತ್ರ ನಕುಲ್ ನಾಥ್ ಜಯಗಳಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *