ಮೋದಿ ಆಟ ನಿಲ್ಲಂಗಿಲ್ಲ.. ಕುರ್ಚಿ ಆಟ ಬಿಡಂಗಿಲ್ಲ.. ಕೈ ಕಾಟ ತಪ್ಪಂಗಿಲ್ಲ..!

Public TV
5 Min Read
RAHUL GANDI MODI

– ಪಂಚ ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶದ ಅವಲೋಕನ
– ಎಲ್ಲರೂ ಹುಮ್ಮಸ್ಸಿನಿಂದ ಸಜ್ಜಾಗ್ತಿದಾರೆ ಲೋಕಸಭಾ ಹಣಾಹಣಿಗೆ

ದೇಶದಲ್ಲೀಗ ಮುಂದಿನ ರಾಜಕೀಯದ ಬಗ್ಗೆ ಚರ್ಚೆ ಶುರುವಾಗಿದೆ. ಇದಕ್ಕೆ ಕಾರಣ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‍ಗಢದಲ್ಲಿ ಕಾಂಗ್ರೆಸ್ ರೋಚಕ ಗೆಲುವನ್ನ ಸಾಧಿಸಿರೋದು. ದೇಶದಲ್ಲಿ ಕೇವಲ 3 ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಈಗ ಒಂದು ರಾಜ್ಯ ಮಿಜೋರಾಂ ಕಳೆದುಕೊಂಡು ಮೂರನ್ನು ಗೆದ್ದಿದೆ. ಇದರ ಮೂಲಕ ಒಟ್ಟು ಪಂಜಾಬ್, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‍ಗಢ ಹಾಗೂ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಆದ್ರೆ, ಈಗ ಕಾಂಗ್ರೆಸ್ 3 ರಾಜ್ಯಗಳಲ್ಲಿ ಗೆದ್ದ ಮಾತ್ರಕ್ಕೆ 2019ರ ಲೋಕಸಭೆಯಲ್ಲೂ ಗೆಲ್ಲುತ್ತೆ ಅಂತಾ ಲೆಕ್ಕಹಾಕ್ತಿದ್ರೆ ಆ ಹಾದಿ ಅಷ್ಟು ಸುಲಭವಾಗಿಲ್ಲ.

ನಮ್ಮ ದೇಶದ ಜನರು ವಿಧಾನಸಭೆ ಚುನಾವಣೆಯಲ್ಲಿ ಮತ ಹಾಕೋ ಕಾರಣಗಳೇ ಬೇರೆ, ಲೋಕಸಭೆಯಲ್ಲಿ ಆಯ್ಕೆ ಮಾಡೋ ರೀತಿಯೇ ಬೇರೆ. ಇದೇ ನಮ್ಮ ದೇಶದ ಪ್ರಜಾಪ್ರಭುತ್ವದ ಶಕ್ತಿ. 2013ರಲ್ಲಿ ಕರ್ನಾಟಕದಲ್ಲಿ ಜನ ಕಾಂಗ್ರೆಸ್ ಆಯ್ಕೆ ಮಾಡಿದ್ರೆ, 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಅತೀ ಹೆಚ್ಚು ಮತಗಳನ್ನ ನೀಡಿದ್ರು.

ELECTION

ಈಗ 3 ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರೋದು ನಿಜಕ್ಕೂ ಕಾಂಗ್ರೆಸ್ ಕಾರ್ಯಕರ್ತರಲ್ಲಿ ದೊಡ್ಡ ಮಟ್ಟದಲ್ಲೇ ಉತ್ಸಾಹವನ್ನ ತುಂಬಿದೆ. ಜೊತೆಗೆ ಕಳೆದು ಹೋದ ವಿಶ್ವಾಸ ಚಿಗುರೊಡೆದಿದೆ. ಈ ಗೆಲುವು ಲೋಕಸಭೆಗೆ ದೊಡ್ಡ ಮಟ್ಟದಲ್ಲಿ ಲಾಭ ತಂದುಕೊಡದಿದ್ದರೂ ತಕ್ಕಮಟ್ಟಿಗೆ ಕಾಂಗ್ರೆಸ್‍ಗೆ ಲಾಭವಂತೂ ಆಗಲಿದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಪಪ್ಪು ಅಂತಾ ಕರೆಸಿಕೊಳ್ತಿದ್ದ ರಾಹುಲ್ ಗಾಂಧಿ ಈಗ ರಾಜಕೀಯದಲ್ಲಿ ಪಳಗಿದ್ದಾರೆ ಅಂತಾ ಕಾಂಗ್ರೆಸ್ ನಾಯಕರಲ್ಲೇ ಅನ್ನಿಸೋಕೆ ಆರಂಭವಾಗಿದೆ. ಈ ಮೂರು ರಾಜ್ಯಗಳ ಒಟ್ಟು ಲೋಕಸಭಾ ಸೀಟುಗಳು 65. ಇದರಲ್ಲಿ ಬಿಜೆಪಿ 60 ಸೀಟುಗಳನ್ನ ಗೆದ್ದಿದ್ರೆ, ಕಾಂಗ್ರೆಸ್ ಕೇವಲ 5 ಸೀಟುಗಳನ್ನ ಗೆದ್ದಿತ್ತು 2014ರಲ್ಲಿ. ಆಗ ಬಿಜೆಪಿಯೇ ಈ ರಾಜ್ಯಗಳಲ್ಲಿ ಅಧಿಕಾರದಲ್ಲಿತ್ತು. ಆದ್ರೆ, ಈಗ ಕಾಂಗ್ರೆಸ್ ಅಧಿಕಾರಕ್ಕೇರಿರೋದ್ರಿಂದ ಕಾಂಗ್ರೆಸ್‍ಗೆ ಪೂರ್ಣ ಪ್ರಮಾಣದಲ್ಲಿ ಲಾಭವಾಗದೇ ಇದ್ದರೂ ತಕ್ಕಮಟ್ಟಿಗೆ ಲಾಭ ಖಂಡಿತವಾಗಿಯೂ ಆಗುತ್ತೆ. ಕಾರಣ, ಈ ರಾಜ್ಯದ ಜನ ಆಡುವ ಮಾತು, “ಹಮ್ ಮೋದಿಕೋ ಛೋಡೇಂಗೆ ನಹಿ, ಇನ್ ಕೋ ಯಹಾ ರಖೇಂಗೆ ನಹೀ” ಅನ್ನೋ ಮಾತನ್ನ ಹೇಳ್ತಿರೋದು. ಕೇಂದ್ರದಲ್ಲಿ ಮೋದಿ ಬೇಕು ರಾಜ್ಯದಲ್ಲಿ ಇವರು ಬೇಡ ಅನ್ನೋ ಮಾತುಗಳು ಸರ್ವೇ ಸಾಮಾನ್ಯವಾಗಿದೆ.

modi rally 24

ಬಿಜೆಪಿ ಈ ಮೂರು ರಾಜ್ಯಗಳನ್ನ ಸೋತಿರಬಹುದು. ಆದ್ರೆ, ಜನ ಬಿಜೆಪಿಯನ್ನ ತಿರಸ್ಕಾರ ಮಾಡಿದಂತೆ ಕಾಣಿಸುತ್ತಿಲ್ಲ. ಕಾರಣ, ಈ ಮೂರು ರಾಜ್ಯಗಳ ಪೈಕಿ ಎರಡು ರಾಜ್ಯಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಡೆದಿರುವ ಶೇಕಡಾವಾರು ಮತಗಳನ್ನ ನೋಡಿದಾಗ ಇದು ಮೇಲ್ನೋಟಕ್ಕೆ ಕಾಣಿಸುತ್ತೆ. ಮಧ್ಯಪ್ರದೇಶದಲ್ಲಿ ಶೇ.41 ರಷ್ಟು ಬಿಜೆಪಿ ಮತಗಳನ್ನ ಪಡೆದಿದ್ದರೆ, ಕಾಂಗ್ರೆಸ್ 40.09ರಷ್ಟು ಮತಗಳನ್ನ ಪಡೆದಿದೆ. ಇನ್ನು ರಾಜಸ್ಥಾನದಲ್ಲಿ ಬಿಜೆಪಿ ಶೇ.38.8 ರಷ್ಟು ಮತಗಳನ್ನ ಪಡೆದಿದ್ದರೆ, ಕಾಂಗ್ರೆಸ್ 39.03 ರಷ್ಟು ಪಡೆದಿದೆ. ಹಾಗಾಗಿ ಬಿಜೆಪಿ ಸೀಟುಗಳ ಲೆಕ್ಕದಲ್ಲಿ ಸೋತಿದ್ದರೂ ಸಹ ಜನರ ಮತಗಳಿಕೆಯಲ್ಲಿ ಸೋತಿಲ್ಲ ಅನ್ನೋ ವಾದವನ್ನ ಮಾಡುತ್ತಿದೆ. ಹಾಗಾಗಿಯೇ ಲೋಕಸಭೆಯ ಮೇಲೆ ಇನ್ನೂ ಹೆಚ್ಚಿನ ನಂಬಿಕೆಯನ್ನ ಬಿಜೆಪಿ ಉಳಿಸಿಕೊಂಡಿದೆ.

OATH

ಬಿಜೆಪಿ ಈ ರಾಜ್ಯಗಳಲ್ಲಿ ಸೋಲನ್ನ ಕಾಣುವುದಕ್ಕೆ ಪ್ರಮುಖವಾಗಿ ಇರೋದೆ ಆಡಳಿತ ವಿರೋಧಿ ಅಲೆ. ಮಿಜೋರಾಂನಲ್ಲಿ ಸತತ 10 ವರ್ಷಗಳಿಂದ ಇದ್ದ ಕಾಂಗ್ರೆಸ್ ಪಕ್ಷವನ್ನು ಸ್ಥಳೀಯ ಪ್ರಾದೇಶಿಕ ಪಕ್ಷ ಎಂಎನ್‍ಎಫ್ ಗುಡಿಸಿ ಮೂಲೆಗುಂಪು ಮಾಡಿದೆ. ಹಾಗೇ ಛತ್ತೀಸ್‍ಗಢದಲ್ಲಿ ಒಳ್ಳೆಯ ಹೆಸರನ್ನ ರಮಣಸಿಂಗ್ ಹೊಂದಿದ್ದರೂ ಸಹ, ಗೆಲುವು ಸಾಧ್ಯವಾಗಲಿಲ್ಲ. ಬದಲಾಗಿ ಅತ್ಯಂತ ಹೀನಾಯವಾಗಿ ಸೋಲಬೇಕಾಯ್ತು. ಇಲ್ಲಿ ಕಾಂಗ್ರೆಸ್ ಒಡೆದು ಹೋಗಿದ್ದರೂ ಅದರ ಎಫೆಕ್ಟ್ ಚುನಾವಣೆಯ ಮೇಲೆ ಆಗಲೇ ಇಲ್ಲ. ಇನ್ನು ರಾಜಸ್ಥಾನದಲ್ಲಿ ಅತ್ಯಂತ ದುರಹಂಕಾರದಿಂದ, ಸರ್ವಾಧಿಕಾರದಿಂದ ಜನರ ಹತ್ತಿರವೂ ಸುಳಿಯದೇ ಜನರ ಪ್ರೀತಿಯನ್ನ ಕಡೆಗಣಿಸಿ ಅಧಿಕಾರದ ಮದದಿಂದ ಮೆರೆಯುತ್ತಿದ್ದ ವಸುಂಧರಾ ರಾಜೇಯನ್ನ ದೂರಾನೇ ಇರಿ ನಮ್ಮಿಂದ ಅಂತಾ ಜನ ವಾಪಸ್ ಅಧಿಕಾರದಿಂದ ವಾಪಸ್ ಕಳಿಸಿದ್ದಾರೆ. ಆದ್ರೆ, ಮಧ್ಯಪ್ರದೇಶದಲ್ಲಿ ಜನರ ಹತ್ತಿರವೂ ಇದ್ದು, ಜನರಿಗೆ ಉಪಕಾರಿಯಾಗುವ ಯೋಜನೆಗಳನ್ನ ತಂದು ಕೂಡ ಶಿವರಾಜ್‍ಸಿಂಗ್ ಚೌಹಾಣ್ ಸೋಲಬೇಕಾಯ್ತು. ಇದಕ್ಕೆ ಕಾರಣ, ಸರ್ಕಾರದ ಮೇಲೆ ಬಂದಿದ್ದ ಆರೋಪಗಳು, ಜೊತೆಗೆ ರೈತರ ಪ್ರತಿಭಟನೆ ವೇಳೆ ಗೋಲಿಬಾರ್ ನಡೆಸಿ 5 ರೈತರನ್ನ ಬಲಿ ಪಡೆದಿದ್ದು, ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಕೆರಳಿ ದಲಿತರು ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ 5 ದಲಿತರು ಹತ್ಯೆಗೀಡಾಗಿದ್ದು. ಇವೆಲ್ಲವೂ ದೊಡ್ಡ ಮಟ್ಟದಲ್ಲಿ ಪ್ರಭಾವವನ್ನು ಬೀರಿರಬಹುದು.

Mamata Banerjee HDD Chandrababu Naidu Rahul gandhi

ಇದೆಲ್ಲದಕ್ಕಿಂತ ಹೆಚ್ಚಾಗಿ ಪ್ರಧಾನಿ ಮೋದಿ ಎಲ್ಲೆಲ್ಲಿ ಪ್ರಚಾರಕ್ಕೆ ಹೋಗ್ತಾರೋ ಅಲ್ಲೆಲ್ಲಾ ಮ್ಯಾಜಿಕ್ ಮಾಡ್ಕೊಂಡು ಬರ್ತಾರೆ ಅನ್ನೋ ಮಾತು ಇತ್ತು. ಅದು ಈ ಪಂಚರಾಜ್ಯ ಚುನಾವಣೆವರೆಗೂ ನಡೆದಿರೋದು ನಿಜ. ಕರ್ನಾಟಕದಲ್ಲೂ ಬಿಜೆಪಿ 104 ಸೀಟುಗಳನ್ನ ಪಡೆಯಬೇಕಾದ್ರೆ ಮೋದಿಯ ಅಲೆ ಇಲ್ಲದೆ ಸಾಧ್ಯವೇ ಇರ್ತಿರಲಿಲ್ಲ. ಆದ್ರೆ, ಈಗ ಸ್ಥಾನ ಪಲ್ಲಟವಾಗಿದೆ. ಪ್ರಧಾನಿ ಮೋದಿ ಎಲ್ಲೆಲ್ಲಿ ಪ್ರಚಾರ ನಡೆಸಿದ್ದಾರೋ ಅದರ ಅರ್ಧದಷ್ಟು ಸೀಟುಗಳನ್ನ ಆ ಭಾಗದಲ್ಲಿ ಕಳೆದುಕೊಂಡಿದೆ ಬಿಜೆಪಿ. ಕೇವಲ ಪ್ರಧಾನಿ ಮೋದಿ ಒಬ್ಬರೇ ಅಲ್ಲ, ಮೋದಿಗಿಂತಲೂ ಹೆಚ್ಚಾಗಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಯಾವ ರಾಜ್ಯಕ್ಕೆ ಹೋಗಿ ಪ್ರಚಾರ ನಡೆಸಿದ್ರೋ ಆ ಭಾಗದಲ್ಲಿ ಜನ ಬಿಜೆಪಿಯನ್ನ ತಿರಸ್ಕಾರ ಮಾಡಿದ್ದಾರೆ. ಅತಿಯಾದ ಹಿಂದುತ್ವದ ಬಗ್ಗೆ ಯೋಗಿ ಮಾತನಾಡಿದ್ದೇ ಬಿಜೆಪಿಗೆ ಮುಳುವಾದಂತೆ ಕಾಣಿಸುತ್ತಿದೆ.

RAHUL 1

ಈಗ ಎಲ್ಲ ಪಕ್ಷಗಳ ಗುರಿಯೊಂದೇ, ಅದು 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನ ಸೋಲಿಸುವುದು. ಈ ನಿಟ್ಟಿನಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಮಹಾ ಮೈತ್ರಿಕೂಟ ರಚನೆ ಮಾಡಲಾಗಿದೆ. 20ಕ್ಕಿಂತಲೂ ಹೆಚ್ಚು ಪಕ್ಷಗಳು ಒಟ್ಟಾಗಿ ಈಗ ಮೋದಿ ವಿರುದ್ಧ ಹೋರಾಡಲು ಸಿದ್ಧವಾಗಿವೆ ನಿಂತಿವೆ. ಗೆಲುವಿನ ರುಚಿ ಕಂಡಿರೋ ಕಾಂಗ್ರೆಸ್ ಅತ್ಯಂತ ಉತ್ಸಾಹದಲ್ಲಿ ಸಜ್ಜಾಗ್ತಿದೆ. ಅತ್ತ ಮೋದಿ ಹಾಗೂ ಅಮಿತ್ ಷಾ ಕೂಡ ಹೊಸ ತಂತ್ರಗಳನ್ನ ಹೆಣೆಯೋಕೆ ಶುರುಮಾಡಿದ್ದಾರೆ. ಜನರನ್ನ ಸೆಳೆಯೋಕೆ ಇನ್ನುಳಿದ 5 ತಿಂಗಳಿನಲ್ಲಿ ಏನೆಲ್ಲ ಕಸರತ್ತು ಮಾಡಬಹುದೋ ಅದೆಲ್ಲವನ್ನೂ ಮಾಡೋಕೆ ಸಜ್ಜಾಗಿ ನಿಂತಿದ್ದಾರೆ.

BSY BJP

ಇನ್ನು ರಾಜ್ಯದ ವಿಷಯಕ್ಕೆ ಬರೋದಾದ್ರೆ, ಬಿಜೆಪಿಯ ಕೆಲವು ಜನಪರ ಯೋಜನೆಗಳನ್ನ ರಾಜ್ಯಮಟ್ಟದಲ್ಲಿ ಜನರಿಗೆ ತಿಳಿಸುವ ಕೆಲಸವನ್ನ ಮಾಡಬೇಕಾದ ರಾಜ್ಯ ನಾಯಕರುಗಳು, ಅಧಿಕಾರದ ಆಸೆಗೆ ಕುರ್ಚಿ ಮೇಲೆ ಕುಳಿತುಕೊಳ್ಳುವ ದುರಾಸೆಯಿಂದ ಸ್ವಾರ್ಥ ರಾಜಕಾರಣ ಮಾಡುತ್ತಾ, ಆಪರೇಷನ್ ಕಮಲದಲ್ಲೆ ಬ್ಯುಸಿ ಆಗಿದ್ದಾರೆ ಅನ್ನೋದನ್ನ ದೆಹಲಿಯ ಬಿಜೆಪಿಯ ನಾಯಕರು ಈಗ ಆಡುತ್ತಿರುವ ಮಾತುಗಳು. ರಾಜ್ಯದಲ್ಲಿನ ದೋಸ್ತಿ ಸರ್ಕಾರವೂ ಕೂಡ ಇಲ್ಲಿನ ಬಿಜೆಪಿ ನಾಯಕರುಗಳಿಗೆ ಅಧಿಕಾರದ ಆಸೆ ತೋರಿಸೋ ಹಾಗೆ ಕೆಲ ಶಾಸಕರನ್ನ ಬಿಜೆಪಿ ಬಳಿ ಕಳಿಸಿ ಸುಮ್ ಸುಮ್ನೆ ಕಾಲಹರಣ ಮಾಡೋದ್ರಲ್ಲಿ ಬಿಜೆಪಿಯನ್ನ ನಿರತರನ್ನಾಗಿಸಿದೆ. ಪಟೇಲರು ಒಂದು ಸಲ ವಿಧಾನಸಭೆಯಲ್ಲಿ ಹೇಳಿದ ಹೋರಿ ಹಾಗೂ ನಾಯಿಯ ಕಥೆಯಂತೆ ಇದು ಬಿಜೆಪಿ ನಾಯಕರಿಗೆ ಅರ್ಥವಾಗ್ತಿಲ್ಲ.

– ಅರುಣ್ ಬಡಿಗೇರ್

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *