-ಕೊರೊನಾ ಕಂಟೈನ್‍ಮೆಂಟ್ ಝೋನ್‍ನಲ್ಲಿ ಕುಳಿತಿದ್ದ
-ಸಿಮ್ ಎಸೆದು, ಮೊಬೈಲ್ ಇಟ್ಕೊಂಡು ಸಿಕ್ಕ
ಭೋಪಾಲ್: ದೃಷ್ಟಿ ವಿಶೇಷ ಚೇತನ ಬ್ಯಾಂಕ್ ವ್ಯವಸ್ಥಾಪಕಿಯ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕನನ್ನು ಬಂಧಿಸುವಲ್ಲಿ ಭೋಪಾಲ್ ಪೊಲೀಸರು ಯಶಸ್ವಿಯಾಗಿದ್ದಾರೆ. ಧ್ವನಿಯ ಮೂಲಕ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ. ಏಪ್ರಿಲ್ ಎರಡನೇ ವಾರದಲ್ಲಿ ಮಧ್ಯಪ್ರದೇಶದ ಶಹಪುರದಲ್ಲಿ ಈ ಘಟನೆ ನಡೆದಿತ್ತು.
ಆರೋಪಿ ಎಷ್ಟೇ ಚಾಣಕ್ಷನಾಗಿದ್ದರೂ ಒಂದಿಲ್ಲೊಂದು ಸುಳಿವುನ್ನು ಘಟನಾ ಸ್ಥಳದಲ್ಲಿ ಬಿಟ್ಟು ಹೋಗಿರುತ್ತಾನೆ ಎಂಬುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ದೃಷ್ಟಿ ವಿಶೇಷ ಚೇತನ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ರೆ ತನ್ನನ್ನು ಯಾರೂ ಗುರುತಿಸಲಾರ ಎಂದು ಅಡಗಿ ಕುಳಿತವನನ್ನು ಪೊಲೀಸರ ಬಂಧಿಸಿ ಕಂಬಿ ಎಣಿಸುವಂತೆ ಮಾಡಿದ್ದಾರೆ.
53 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಬಳಿಕ ಆರೋಪಿ ಮನೆಯಲ್ಲಿದ್ದ ಆಭರಣ, ಮೊಬೈಲ್ ಮತ್ತು ನಗದು ಜೊತೆ ಪರಾರಿಯಾಗಿದ್ದನು. ಆದ್ರೆ ಈ ವೇಳೆ ಆರೋಪಿ ಮಹಿಳೆಗೆ ಹಲವು ಬಾರಿ ಬೆದರಿಕೆ ಹಾಕಿದ್ದನು ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದರು ಎಂದು ಎಎಸ್‍ಪಿ ಸಂಜಯ್ ಸಾಹು ಮಾಹಿತಿ ನೀಡಿದ್ದಾರೆ.
ಶಂಕಿತರ ಧ್ವನಿ ಸಂಗ್ರಹ: ಮಹಿಳೆ ನೀಡಿದ ಮಾಹಿತಿ ಮತ್ತು ಮೊಬೈಲ್ ನೆಟ್‍ವರ್ಕ್ ಆಧಾರದ ಮೇಲೆ ತನಿಖೆಗಿಳಿದ ಪೊಲೀಸರು ಶಂಕೆಯ ಮೇಲೆ ಸುಮಾರು 20 ಜನರನ್ನು ವಶಕ್ಕೆ ಪಡೆದುಕೊಂಡಿದ್ದರು. ಆದ್ರೆ ಸಂತ್ರಸ್ತೆ ಅಂಧೆಯಾಗಿದ್ದರಿಂದ ಯಾರನ್ನು ಗುರುತಿಸಲು ಸಾಧ್ಯವಿರಲಿಲ್ಲ. ಹಾಗಾಗಿ ದೂರಿನಲ್ಲಿ ಹೇಳಿದಂತೆ ಆರೋಪಿ ಮಹಿಳೆಗೆ ಹಲವು ಬಾರಿ ಬೆದರಿಕೆ ಹಾಕಿದ್ದನು. ಅದೇ ರೀತಿ 20 ಜನರಿಂದಲೂ ಬೆದರಿಕೆ ಹಾಕುವಂತೆ ಹೇಳಿ ಪೊಲೀಸರು ಎಲ್ಲರ ಧ್ವನಿಯನ್ನು ರೆಕಾರ್ಡ್ ಮಾಡಿಕೊಂಡಿದ್ದರು. ಈ 20 ಧ್ವನಿಗಳಲ್ಲಿ ಒಂದು ಧ್ವನಿ ಅವನದ್ದೇ ಎಂದು ಸಂತ್ರಸ್ತೆ ಗುರುತಿಸಿ ಪೊಲೀಸರಿಗೆ ತಿಳಿಸಿದ್ದಾರೆ.
ಆರಂಭದಲ್ಲಿ ತನ್ನ ತಪ್ಪನ್ನು ಆರೋಪಿ ಒಪ್ಪಿಕೊಂಡಿರಲಿಲ್ಲ. ಆತನ ಬಳಿಯಲ್ಲಿದ್ದ ಮೊಬೈಲ್ ಪತ್ತೆ ಮಾಡಿದಾಗ ತಪ್ಪು ಒಪ್ಪಿಕೊಂಡನು. ಮಹಿಳೆ ಅಂಧರ ಸುರಕ್ಷತೆಗಾಗಿರುವ ಆ್ಯಪ್ ಡೌನ್‍ಲೋಡ್ ಮಾಡಿಕೊಂಡಿದ್ದರು. ಸಿಮ್ ಎಸೆದ ಆರೋಪಿ ಆ್ಯಪ್ ಬಗ್ಗೆ ಗಮನ ನೀಡಿರಲಿಲ್ಲ ಎಂದು ಸಂಜಯ್ ಸಾಹು ಹೇಳಿದ್ದಾರೆ.
ಕಂಟೈನ್‍ಮೆಂಟ್ ಝೋನ್‍ನಲ್ಲಿ ಕುಳಿತಿದ್ದ: ಘಟನೆ ಬಳಿಕ ಆರೋಪಿ ಕಂಟೈನ್‍ಮೆಂಟ್ ವಲಯದಲ್ಲಿ ಅಡಗಿ ಕುಳಿತಿದ್ದನು. ಮಹಿಳೆ ಸಿಮ್ ಸಹ ಅದೇ ಏರಿಯಾದಲ್ಲಿ ಸಂಪರ್ಕ ಕಡಿತಗೊಂಡಿತ್ತು. ಹೀಗಾಗಿ ಪೊಲೀಸರು ಪಿಪಿಇ ಕಿಟ್ ಧರಿಸಿ ಅನುಮಾನಸ್ಪಾದ ಮೇಲೆ 20 ಜನರನ್ನು ವಶಕ್ಕೆ ಪಡೆದು ಠಾಣೆಗೆ ತಂದಿದ್ದರು.
ಏನಿದು ಪ್ರಕರಣ?: ಸಂತ್ರಸ್ತೆಯ ಪತಿ ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ತನ್ನ ಗ್ರಾಮಕ್ಕೆ ಹೋಗಿದ್ದರು. ಆದರೆ ಕೊರೊನಾದಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದ್ದರಿಂದ ಪತಿ ಅಲ್ಲಿಯೇ ಉಳಿದುಕೊಂಡಿದ್ದರು. ಹೀಗಾಗಿ ಸಂತ್ರಸ್ತೆ ಮೂರು ಮಹಡಿಯನ್ನು ಹೊಂದಿರುವ ಫ್ಲಾಟ್‍ನಲ್ಲಿ ಎರಡನೇ ಮಹಡಿಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಮಹಿಳೆ ತುಂಬಾ ಸೆಕೆಯಾಗುತ್ತಿದೆ ಎಂದು ಬಾಲ್ಕನಿಯ ಬಾಗಿಲುಗಳನ್ನು ತೆರೆದಿಟ್ಟು ಮಲಗಿದ್ದರು. ಈ ವೇಳೆ ಶಂಕಿತ ಮೆಟ್ಟಿಲಿನಿಂದ ಎರಡನೇ ಮಹಡಿಗೆ ನಡೆದುಕೊಂಡು ಹೋಗಿದ್ದು, ಅಲ್ಲಿ ಬಾಗಿಲು ತೆರೆದಿದ್ದ ಬಾಲ್ಕನಿಯಿಂದ ಫ್ಲಾಟ್‍ಗೆ ನುಗ್ಗಿ ಅತ್ಯಾಚಾರ ಎಸಗಿ ಆಭರಣ, ಹಣದಿಂದ ಪರಾರಿಯಾಗಿದ್ದನು.