ಬೆಂಗಳೂರು: ಪಕ್ಷದ ಕಾರ್ಯಕರ್ತರಿಗೆ ಮನ್ನಣೆ ಸಿಗಲಿ ನಾನು ಬೇಡವಾದರೆ ಪಕ್ಷದಿಂದ ಕಿತ್ತು ಹಾಕಲಿ ಎಂದು ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ಅವರು ಕುಮಾರಸ್ವಾಮಿಗೆ ಸವಾಲು ಎಸೆದಿದ್ದಾರೆ.
ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ತಮ್ಮ ಹುಟ್ಟುಹಬ್ಬವನ್ನೇ ಅಸಮಾಧಾನ ಹೊರಹಾಕುವ ವೇದಿಕೆ ಮಾಡಿಕೊಂಡರು. ಸಮ್ಮಿಶ್ರ ಸರ್ಕಾರದ ಅಧಿಕಾರಾವಧಿಯಲ್ಲಿ ಕಾರ್ಯಕರ್ತರ ಕಡೆಗಣಿಸಲಾಗಿದೆ. ಪಕ್ಷದ ಮರ್ಯಾದೆ ಉಳಿಯಬೇಕಾದರೆ ತಪ್ಪದೇ ಯೂಸ್ ಲೆಸ್ ಫೆಲೋ ರಾಜೀನಾಮೆ ಪಡೆಯಬೇಕಿದೆ. ನಾನು ಪಕ್ಷದಲ್ಲಿ ಈಗ ಇದ್ದೀನಿ, ಮುಂದೆ ಗೊತ್ತಿಲ್ಲ ಎಂದು ತಮ್ಮ ರಾಜಕೀಯ ನಡೆಯನ್ನ ಬಿಚ್ಚಿಟ್ಟಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮಧುಬಂಗಾರಪ್ಪ ಇಂದು ನಟ ಶಿವರಾಜ್ ಕುಮಾರ್ ಜೊತೆಗೂಡಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು. ಈ ವೇಳೆ ಮಾತನಾಡಿದ ಅವರು, ಜೆಡಿಎಸ್ ಪಾರ್ಟಿ ಹಾಗೂ ಸಮ್ಮಿಶ್ರ ಸರ್ಕಾರದ ವೇಳೆಯಲ್ಲಿ ಜೆಡಿಎಸ್ ಕಾರ್ಯಕರ್ತರಿಗೆ ಮನ್ನಣೆ ಸಿಗದೇ, ರಮೇಶ್‍ಗೌಡರಂತಹವರಿಗೆ ಮನ್ನಣೆ ಸಿಕ್ಕಿದೆ. ವಿಶ್ವನಾಥ್ ಪಕ್ಷ ಬಿಟ್ಟು ಹೋಗಿದ್ದಕ್ಕೆ ಪಕ್ಷ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದು ಕಾರಣ ಎಂದು ಟೀಕಿಸಿದರು.
ಇದೇ ವೇಳೆ ಕಾಂಗ್ರೆಸ್ ನಾಯಕರು ತಮಗೆ ಹತ್ತಿರವಿದ್ದು, ಬೇಸಿಗೆ ಮುಗಿದ ಮೇಲೆ ರಾಜಕೀಯ ಲೆಕ್ಕಚಾರ ನೋಡೋಣ ಎಂಬ ಗುಟ್ಟನ್ನ ಬಿಟ್ಟುಕೊಟ್ಟಿದ್ದಾರೆ. ಜೆಡಿಎಸ್ ಬೆಳೆಯಲು ಕಾರ್ಯಕರ್ತರೇ ಕಾರಣ. ಹೀಗಾಗಿ ಪಕ್ಷದ ಕಾರ್ಯಕರ್ತರಿಗೆ ಮನ್ನಣೆ ಸಿಗಲಿ, ನಾನು ಬೇಡವಾದರೆ ಪಕ್ಷದಿಂದ ಕಿತ್ತು ಹಾಕಲಿ ಎಂದು ಮಧು ಬಂಗಾರಪ್ಪ, ಕುಮಾರಸ್ವಾಮಿಗೆ ಸವಾಲು ಎಸೆದಿದ್ದಾರೆ.