ನವದೆಹಲಿ: ಭಾರತದಲ್ಲಿ ಐಫೋನ್ ಮಾರುಕಟ್ಟೆಯನ್ನು ವಿಸ್ತರಿಸಲು ಆಪಲ್ 1 ಶತಕೋಟಿ ಡಾಲರ್(ಅಂದಾಜು 714 ಕೋಟಿ ರೂ.) ಹೂಡಿಕೆ ಮಾಡಲಿದೆ.
ಚೀನಾಕ್ಕಿಂತ ಭಾರತದಲ್ಲಿ ಐಫೋನ್ ಗಳನ್ನು ಉತ್ಪಾದನೆ ಮಾಡಲು ಆಪಲ್ ಮುಂದಾಗುತ್ತಿದ್ದು, ಈ ನಿಟ್ಟಿನಲ್ಲಿ ತನ್ನ ಪಾಲುದಾರರ ಮೂಲಕ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದೆ ಎಂದು ವರದಿಯಾಗಿದೆ.
Advertisement
ಅಮೆರಿಕ ಮತ್ತು ಚೀನಾದ ನಡುವೆ ಈಗ ವ್ಯಾಪಾರ ಸಮರ ಜೋರಾಗುತ್ತಿದೆ. ಹೀಗಾಗಿ ಭಾರತದಲ್ಲಿ ಹೂಡಿಕೆ ಮಾಡುವುದು ಉತ್ತಮ ಎನ್ನುವ ನಿರ್ಧಾರಕ್ಕೆ ಆಪಲ್ ಬಂದಿದ್ದು, ಭಾರತದಲ್ಲಿ ತಯಾರಾದ ಫೋನ್‍ಗಳನ್ನು ಇತರೇ ರಾಷ್ಟ್ರಗಳಿಗೆ ಮಾರಾಟ ಮಾಡಲು ಮುಂದಾಗುತ್ತಿದೆ.
Advertisement
Advertisement
ಈ ಹಿಂದೆ ಆಪಲ್ ವಿಯೆಟ್ನಾಂ ಮತ್ತು ಭಾರತದಲ್ಲಿ ಹೂಡಿಕೆ ಮಾಡಲಿದೆ ಎಂದು ವರದಿಯಾಗಿತ್ತು. ಆದರೆ ಈಗ ಕ್ಯಾಲಿಫೋರ್ನಿಯಾ ಮೂಲದ ಆಪಲ್ ಕಂಪನಿ ಭಾರತದಲ್ಲಿ ಹೂಡಿಕೆಗೆ ಮುಂದಾಗಿದೆ.
Advertisement
ಆಪಲ್ ಚೀನಾದಲ್ಲಿ ತೈವಾನ್ ಮೂಲದ ಫಾಕ್ಸ್ ಕಾನ್ ಕಂಪನಿಯಲ್ಲಿ ಐಫೋನ್ ಗಳನ್ನು ತಯಾರಿಸುತ್ತಿದೆ. ಸಾಫ್ಟ್ ವೇರ್ ಗಳನ್ನು ಆಪಲ್ ಕಂಪನಿಯೇ ಅಭಿವೃದ್ಧಿ ಪಡಿಸಿದ್ದರೂ ಫೋನಿನ ಭಾಗಗಳು ಫಾಕ್ಸ್ ಕಾನ್ ಕಂಪನಿಯಲ್ಲಿ ಜೋಡಣೆಯಾಗಿ ಐಫೋನ್ ತಯಾರಾಗಿ ಮಾರಾಟಗೊಳ್ಳುತ್ತಿದೆ.
ಆಪಲ್ ಈಗಾಗಲೇ ವಿಸ್ಟರ್ನ್ ಕಂಪನಿಯ ಜೊತೆ ಬೆಂಗಳೂರು ಸಮೀಪದ ಪೀಣ್ಯದಲ್ಲಿ ಐಫೋನ್ ಉತ್ಪಾದನೆ ಮಾಡುತ್ತಿದೆ. ಈಗ ಚೆನ್ನೈನಲ್ಲಿ ಫಾಕ್ಸ್ ಕಾನ್ ಜೊತೆಗೂಡಿ ಮಾರುಕಟ್ಟೆ ವಿಸ್ತರಿಸಲು ಆಪಲ್ ಮುಂದಾಗುತ್ತಿದೆ ಎಂದು ಮೂಲಗಳನ್ನು ಆಧಾರಿಸಿ ವರದಿಯಾಗಿದೆ.
ಮೇಕ್ ಇನ್ ಇಂಡಿಯಾದ ಬಳಿಕ ಸರ್ಕಾರ ಈಗ ಕಂಪನಿಗಳಿಗೆ ವಿದೇಶಕ್ಕೆ ರಫ್ತು ಮಾಡುವಂತೆ ಉತ್ತೇಜನ ನೀಡುತ್ತಿದೆ. ಈ ಬಗ್ಗೆ ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಸಚಿವ ರವಿಶಂಕರ್ ಪ್ರಸಾದ್, ಆಪಲ್ ಈಗಾಗಲೇ ಭಾರತದಲ್ಲಿ ಐಫೋನ್ ಗಳನ್ನು ಉತ್ಪಾದನೆ ಮಾಡುತ್ತಿದೆ. ಈಗ ಬಿಡಿ ಭಾಗಗಳನ್ನು ಉತ್ಪಾದನೆ ಮಾಡುವುದರ ಜೊತೆಗೆ ವಿದೇಶಕ್ಕೆ ರಫ್ತು ಸಹ ಮಾಡುತ್ತಿದೆ. ಭಾರತದ ಸಾಧನೆ ಕಥೆಯನ್ನು ಪರಿಗಣಿಸಿದರೆ ಆಪಲ್ ಸಾಧನೆ ಉತ್ತಮವಾಗಿದೆ ಎಂದು ತಿಳಿಸಿದರು.
ಆಪಲ್‍ಗೆ ಏನು ಲಾಭ?
ಭಾರತದ ಮಾರುಕಟ್ಟೆಯಲ್ಲಿ ಹೆಚ್ಚಾಗಿ 15 ಸಾವಿರಕ್ಕಿಂತ ಕಡಿಮೆ ಬೆಲೆಯ ಫೋನ್ ಗಳು ಮಾರಾಟವಾಗುತ್ತದೆ. ಐಫೋನ್ ಗಳಿಗೆ ದುಬಾರಿ ದರ ಇರುವ ಪರಿಣಾಮ ಮಾರುಕಟ್ಟೆಯಲ್ಲಿ ಒನ್ ಪ್ಲಸ್, ಸ್ಯಾಮ್‍ಸಂಗ್ ಕಂಪನಿಗಳು ಭಾರೀ ಸ್ಪರ್ಧೆ ನೀಡುತ್ತಿದೆ. ಇದರ ಜೊತೆ ಶೇ.20 ಆಮದು ಸುಂಕ ಇರುವ ಕಾರಣ ಬೆಲೆ ಜಾಸ್ತಿಯಾಗಿ ಭಾರತದ ಮಾರುಕಟ್ಟೆಯಲ್ಲಿ ಐಫೋನ್ ಭಾರೀ ಸ್ಪರ್ಧೆಯನ್ನು ಎದುರಿಸುತ್ತಿದೆ.
ವಿಶ್ವದಲ್ಲಿ ಚೀನಾ ಬಿಟ್ಟರೆ ಅತಿ ಹೆಚ್ಚು ಸ್ಮಾರ್ಟ್ ಫೋನ್ ಹೊಂದಿರುವ ದೇಶ ಭಾರತವಾಗಿದ್ದು ಇಲ್ಲಿನ ಮಾರುಕಟ್ಟೆಯನ್ನು ಕಳೆದುಕೊಂಡರೆ ಭವಿಷ್ಯದಲ್ಲಿ ನಮಗೆ ನಷ್ಟ ಎಂದು ತಿಳಿದಿರುವ ಆಪಲ್ ಈಗ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಿದೆ.