ನವದೆಹಲಿ: ಎಲ್ಲವೂ ನಿಗದಿಯಂತೆ ನಡೆದರೆ ಮುಂದಿನ ದಿನಗಳಲ್ಲಿ ಟಾಟಾ ಕಂಪನಿ (Tata Company) ಕೋಲಾರದಲ್ಲಿ (Kolara) ತಯಾರಿಸಿದ ಮೇಡ್ ಇನ್ ಇಂಡಿಯಾ ಐಫೋನ್ (iPhone) ಗ್ರಾಹಕರ ಕೈ ಸೇರಲಿದೆ.
ಹೌದು. ಟಾಟಾ ಕಂಪನಿ ತೈವಾನಿನ ವಿಸ್ಟ್ರಾನ್ ಕಂಪನಿಯ ಭಾರತದ ಘಟಕವನ್ನು ಖರೀದಿಸುವ ಮಾತುಕತೆ ಅಂತಿಮ ಹಂತದಲ್ಲಿದೆ. ಎಲ್ಲವೂ ನಿಗದಿಯಂತೆ ನಡೆದರೆ ಈ ಆಗಸ್ಟ್‌ನಲ್ಲೇ ಟಾಟಾ ಕಂಪನಿ ವಿಸ್ಟ್ರನ್ ಕಂಪನಿಯನ್ನು (Wistron Corp) ಖರೀದಿಸಲಿದೆ.
Advertisement
155 ವರ್ಷ ಇತಿಹಾಸ ಹೊಂದಿರುವ ಟಾಟಾ ಗ್ರೂಪ್ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಆದರೆ ಈಗ ಮೊದಲ ಬಾರಿಗೆ ಫೋನ್ ಉತ್ಪದನಾ ಕ್ಷೇತ್ರಕ್ಕೆ ಕೈ ಹಾಕಿದೆ. ಈ ಡೀಲ್ ಪೂರ್ಣಗೊಂಡ ಬಳಿಕ ಐಫೋನ್ ತಯಾರಿಸಿದ ದೇಶದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಟಾಟಾ ಗ್ರೂಪ್ ಪಾತ್ರವಾಗಲಿದೆ.
Advertisement
Advertisement
ಇದು 600 ದಶಲಕ್ಷ ಡಾಲರ್ (ಅಂದಾಜು 4,950 ಕೋಟಿ ರೂ.) ಮೊತ್ತದ ಖರೀದಿ ಡೀಲ್ ಆಗಿದ್ದು ಕಳೆದ ವರ್ಷವೇ ಮಾತುಕತೆ ಆರಂಭವಾಗಿತ್ತು. ಈಗ ಮಾತುಕತೆ ಅಂತಿಮ ಹಂತಕ್ಕೆ ಬಂದಿದೆ ಎಂದು ವರದಿಯಾಗಿದೆ.
Advertisement
ವಿಸ್ಟ್ರಾನ್ ಘಟಕದಲ್ಲಿ 10 ಸಾವಿರ ಮಂದಿ ಉದ್ಯೋಗದಲ್ಲಿದ್ದು, ಐಫೋನ್ 14 ತಯಾರಾಗುತ್ತಿದೆ. ಈ ಹಣಕಾಸು ವರ್ಷದಲ್ಲಿ ಕನಿಷ್ಠ 1.8 ಶತಕೋಟಿ ಡಾಲರ್ ಮೌಲ್ಯದ ಐಫೋನ್ ತಯಾರಿಸುವ ಗುರಿಯನ್ನು ವಿಸ್ಟ್ರಾನ್ ಹಾಕಿಕೊಂಡಿದೆ. ಇದನ್ನೂ ಓದಿ: ಬೆಂಗಳೂರು ಬಳಿ ಭಾರೀ ಮೊತ್ತಕ್ಕೆ ಜಾಗ ಖರೀದಿಸಿದ ಆಪಲ್ ಐಫೋನ್ ತಯಾರಕ ಫಾಕ್ಸ್‌ಕಾನ್
2022-23ರ ಹಣಕಾಸು ವರ್ಷದಲ್ಲಿನ ಮೊಬೈಲ್ ರಫ್ತುಗಳ ಪೈಕಿ ಐಫೋನ್ ಪಾಲು ಶೇ.40 ರಷ್ಟಿದೆ ಎಂದು ನೀತಿ ಆಯೋಗದ ಮಾಜಿ ಸಿಇಒ, ಜಿ20 ಶೆರ್ಪಾ ಅಮಿತಾಬ್ ಕಾಂತ್(Amitabh Kant) ಈ ಹಿಂದೆ ತಿಳಿಸಿದ್ದರು.
2008ರಲ್ಲಿ ಐಫೋನ್ ಬಿಡುಗಡೆಯಾದಾಗ ಭಾರತದಲ್ಲಿ 50 ಸಾವಿರ ಫೋನುಗಳು ಮಾರಾಟವಾಗಿತ್ತು. 2021ರಲ್ಲಿ 50 ಲಕ್ಷ ಐಫೋನ್ ಮಾರಾಟವಾಗಿದ್ದರೆ 2022ರಲ್ಲಿ 70 ಲಕ್ಷಕ್ಕೂ ಅಧಿಕ ಫೋನ್ ಮಾರಾಟವಾಗಿದೆ. ಮಾರಾಟ ಹೆಚ್ಚಾಗುತ್ತಿದ್ದಂತೆ ಆಪಲ್ ಭಾರತದಲ್ಲೇ ಹೆಚ್ಚು ಐಫೋನ್ ಉತ್ಪಾದನೆಗೆ ಮುಂದಾಗಿದೆ.
ವಿಶ್ವದ ಐಫೋನ್ ಮಾರಾಟದಲ್ಲಿ ಕಳೆದ ವರ್ಷ ಭಾರತದ ಘಟಕದ ಪಾಲು ಶೇ.3 ಇದ್ದರೆ 2022ರಲ್ಲಿ ಶೇ.5-7ಕ್ಕೆ ಏರಿಕೆಯಾಗಿದೆ. 2022ರಲ್ಲಿ ಭಾರತದಲ್ಲಿ ಮಾರಾಟವಾದ ಐಫೋನ್ ಪೈಕಿ ಶೇ.85 ರಷ್ಟು ಫೋನುಗಳು ಮೇಡ್ ಇನ್ ಇಂಡಿಯಾ ಫೋನ್ ಆಗಿರುವುದು ವಿಶೇಷ.
ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಚೀನಾವನ್ನು ಹಿಂದಿಕ್ಕಿ ಸ್ವಾವಲಂಬಿಯಾಗಲು ಆತ್ಮನಿರ್ಭರ್ ಯೋಜನೆಯ ಭಾಗವಾಗಿ ಕೇಂದ್ರ ಸರ್ಕಾರ ಭಾರತದ ತಯಾರಕರನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸಲು, ಹೂಡಿಕೆಗಳನ್ನು ಆಕರ್ಷಿಸಿ ರಫ್ತುಗಳನ್ನು ಹೆಚ್ಚಿಸಲು, ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತವನ್ನು ಸಂಯೋಜಿಸಲು ಮತ್ತು ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು 14 ವಲಯಗಳಲ್ಲಿ ಉತ್ಪಾದನೆ ಆಧಾರಿತ ಪ್ರೋತ್ಸಾಹಧನ (Production Linked Incentive) ಯೋಜನೆ ಪ್ರಾರಂಭಿಸಿದೆ.
ಭಾರತವನ್ನು ಮೊಬೈಲ್ ಉತ್ಪಾದನಾ ಹಬ್ ದೇಶವನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಉತ್ಪಾದನೆ ಆಧಾರಿತ ಪ್ರೋತ್ಸಾಹ (ಪಿಎಲ್‍ಐ) ಯೋಜನೆಯನ್ನು 2021 ರಿಂದ ಆರಂಭಿಸಿತ್ತು. ಉದ್ಯೋಗ ಸೃಷ್ಟಿಗಾಗಿ ಆರಂಭಿಸಲಾದ ಈ ಯೋಜನೆ ಅಡಿ ಮುಂದಿನ 5 ವರ್ಷದಲ್ಲಿ 1.5 ಲಕ್ಷ ಕೋಟಿ ಮೌಲ್ಯದ ಮೊಬೈಲ್ ಫೋನ್ ಹಾಗೂ ಬಿಡಿಭಾಗಗಳನ್ನು ಉತ್ಪಾದಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಪಿಎಲ್‍ಐ ಯೋಜನೆ ಅಡಿ ಲಾಭ ಪಡೆದುಕೊಳ್ಳಲು ದೇಶದ ಮತ್ತು ವಿಶ್ವದ ಹಲವು ಕಂಪನಿಗಳು ಆಯ್ಕೆಯಾಗಿವೆ.
Web Stories