ದಾವಣಗೆರೆ: ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್, ಅಪ್ಪನ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರಿನ ಕರ್ನಾಟಕ ನೀರಾವರಿ ನಿಗಮ ನಿಯಮಿತ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಶಾಸಕರು ನಡೆಸಬೇಕಿದ್ದ ಸಭೆಯನ್ನು ಶಾಸಕರ ಪುತ್ರ ನಡೆಸಿದ್ದಾರೆ. ಚನ್ನಗಿರಿ ತಾಲೂಕಿನ ಬಹು ವರ್ಷಗಳ ಯೋಜನೆಯಾದ ಸಾಸ್ವೆಹಳ್ಳಿ ನೀರಾವರಿ ಯೋಜನೆಯ ಬಗ್ಗೆ ಅಧಿಕಾರಿಗಳ ಜೊತೆ ಶಾಸಕರು ಹಾಗೂ ಸಂಸದರು ಸಭೆ ನಡೆಸಬೇಕಿತ್ತು. ಆದರೆ ಶಾಸಕರ ಪುತ್ರ ಸಭೆಯಲ್ಲಿ ಭಾಗವಹಿಸಿದ್ದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
Advertisement
Advertisement
ಶಾಸಕರು ನಡೆಸಬೇಕಿದ್ದ ಸಭೆಯನ್ನು ಶಾಸಕರ ಮಗ ನಡೆಸಿ ಅಧಿಕಾರ ದುರುಪಯೋಗ ಪಡಿಸಿಕೊಂಡಂತೆ. ಮುಂದಿನ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರ ಉತ್ತರಾಧಿಕಾರಿಯಾಗಿ ಸುಪುತ್ರ ಮಾಡಾಳ್ ಮಲ್ಲಿಕಾರ್ಜುನರನ್ನು ನೇಮಿಸುವುದಕ್ಕೆ ಈಗಲೇ ತರಬೇತಿ ನೀಡುತ್ತಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
Advertisement
ಕೆಲ ದಿನಗಳ ಹಿಂದೆಯಷ್ಟೆ ಮಾಡಾಳ್ ಮಲ್ಲಿಕಾರ್ಜುನ್ ಶಿಕ್ಷಕರಿಗೆ ನಿಂದನೆ ಮಾಡಿ ವಿವಾದಕ್ಕೆ ಸಿಲುಕಿದ್ದರು. ಇದೀಗ ಸಭೆಯಲ್ಲಿ ಭಾಗವಹಿಸುವ ಮೂಲಕ ಶಾಸಕರ ಪುತ್ರ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.