ಬೆಂಗಳೂರು: ಕೋಟಿ ಕೋಟಿ ಹಣ ಸಂಗ್ರಹಿಸಿ ಭ್ರಷ್ಟಾಚಾರದ ಆರೋಪಿಯಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Madal Virupakshappa) ನಿರೀಕ್ಷಣಾ ಜಾಮೀನು (Anticipatory Bail) ಕೋರಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ವಕೀಲರ ಮೂಲಕ ಹೈಕೋರ್ಟ್ (High Court) ಏಕಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿ ಇಂದೇ ತುರ್ತು ವಿಚಾರಣೆಗೆ ಮನವಿ ಮಾಡಿದ್ದಾರೆ.
ಇಂದು ವಿಚಾರಣೆ ನಡೆಸಲು ನಿರಾಕರಿಸಿದ ನ್ಯಾಯಮೂರ್ತಿ ನಟರಾಜನ್, ತುರ್ತು ವಿಚಾರಣೆಯ ಅಗತ್ಯವೇನಿದೆ? ನಾಳೆ ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ. ಹೈಕೋರ್ಟ್ ನಾಳೆ ವಿಚಾರಣೆ ನಡೆಯಲಿದೆ. ಇದನ್ನೂ ಓದಿ: ಇಂದಿನಿಂದ ಎಲ್ಲಾ ಆರೋಗ್ಯ ಸಿಬ್ಬಂದಿಗೆ ಮಾಸ್ಕ್ ಕಡ್ಡಾಯ: ಸುಧಾಕರ್
ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸುತ್ತಿದ್ದಂತೆ ಎಚ್ಚೆತ್ತ ಲೋಕಾಯುಕ್ತ (Lokayukta), ಎ1 ಆರೋಪಿ ವಿರೂಪಾಕ್ಷಪ್ಪರಿಗೆ ಲುಕೌಟ್ (Look out circular) ನೋಟಿಸ್ ಜಾರಿಗೆ ನಿರ್ಧರಿಸಿದೆ. ನೋಟಿಸ್ ನೀಡಿಯೂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಲುಕೌಟ್ ನೋಟಿಸ್ ಜಾರಿ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.
ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ ಹಾಗೂ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಲುಕೌಟ್ ನೋಟಿಸ್ ಅಂಟಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ಲೋಕಾಯುಕ್ತ ಪೊಲೀಸರು ಬಲೆ ಬೀಸಿದ್ದಾರೆ.
ಇತ್ತೀಚೆಗೆ ಕಚೇರಿಯಲ್ಲಿ ಲಂಚ ಪಡೆಯುವ ವೇಳೆ ಮಾಡಾಳ್ ವಿರೂಪಾಕ್ಷಪ್ಪ ಅವರ ಮಗ ಪ್ರಶಾಂತ್ ಮಾಡಾಳ್ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದರು. ನಂತರ ಪ್ರಶಾಂತ್ ಮನೆ, ಕಚೇರಿ ಮೇಲೆ ದಾಳಿ ನಡೆಸಿ ಏಳೂವರೆ ಕೋಟಿ ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಅಲ್ಲದೇ ವಿರೂಪಾಕ್ಷಪ್ಪ ಅವರ ಮನೆ ಮೇಲೂ ದಾಳಿ ಮಾಡಿ ನಗದನ್ನು ವಶಕ್ಕೆ ಪಡೆದಿದ್ದರು. ಪ್ರಕರಣದಲ್ಲಿ ಶಾಸಕರನ್ನು ಮೊದಲ ಆರೋಪಿಯಾಗಿದ್ದಾರೆ. ಅಷ್ಟೇ ಅಲ್ಲದೇ ಕೆಎಸ್‍ಡಿಎಲ್‍ನಲ್ಲಿ ಕೋಟ್ಯಂತರ ರೂ. ಹಗರಣ ನಡೆದಿದೆ ಎಂಬ ಆರೋಪ ಕೇಳಿಬರುತ್ತಿದೆ. ಇದನ್ನೂ ಓದಿ: ನೈತಿಕತೆ ಇದ್ರೆ ಸಿಎಂ ರಾಜೀನಾಮೆ ಕೊಡಬೇಕು – ಆರ್.ಧ್ರುವನಾರಾಯಣ್