ಹಾಸನ: ಹುಚ್ಚು ನಾಯಿಯೊಂದು ಸಿಕ್ಕಸಿಕ್ಕವರ ಮೇಲೆ ದಾಳಿ ಮಾಡಿ (Mad Dog Bite) ಸುಮಾರು ಮೂವತ್ತಕ್ಕೂ ಹೆಚ್ಚು ಮಂದಿಗೆ ತೀವ್ರವಾಗಿ ಕಚ್ಚಿ ಗಾಯಗೊಳಿಸಿರುವ ಘಟನೆ ಹಾಸನದ (Hassan) ಸಿದ್ದಯ್ಯನಗರದಲ್ಲಿ ನಡೆದಿದೆ.
ಹುಚ್ಚು ನಾಯಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಗಾಯಾಳುಗಳು ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ ರಾತ್ರಿ ವೇಳೆ ಹಾಸನ ನಗರ ಸೇರಿದಂತೆ ಹಲವೆಡೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಮಳೆಯ ಪರಿಣಾಮ ಹಲವೆಡೆ ವಿದ್ಯುತ್ ವ್ಯತ್ಯಯವಾಗಿತ್ತು. ಈ ವೇಳೆ ಹುಚ್ಚು ನಾಯಿಯೊಂದು ನಡೆದು ಹೋಗುತ್ತಿದ್ದ, ಮಹಿಳೆಯರು, ಪುರುಷರು, ಮಕ್ಕಳು ಸೇರಿ ಸುಮಾರು ಮೂವತ್ತಕ್ಕೂ ಹೆಚ್ಚು ಮಂದಿಗೆ ಭೀಕರವಾಗಿ ಕಚ್ಚಿ ಗಾಯಗೊಳಿಸಿದೆ. ಮುಖ, ಕೈ, ಕಾಲು ತೀವ್ರವಾಗಿ ಕಚ್ಚಿ ಮಾಂಸ ಕಂಡವನ್ನೇ ಕಿತ್ತು ಹಾಕಿದೆ. ಈ ವೇಳೆ ನಾಯಿಯ ದಾಳಿಯಿಂದ ಹೆದರಿದ ಬಡಾವಣೆಯ ನಿವಾಸಿಗಳು ಮನೆಯೊಳಗೆ ಓಡಿ ಹೋಗಿದ್ದಾರೆ. ಇಷ್ಟೇ ಅಲ್ಲದೇ ಶನಿವಾರ ಬೆಳಿಗ್ಗೆಯೂ ಹಲವರ ಮೇಲೆ ಹುಚ್ಚು ನಾಯಿ ದಾಳಿ ಮಾಡಿದೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಭೀಕರ ಅಪಘಾತ – ಕಲಬುರಗಿಯ ಮೂವರು ದುರ್ಮರಣ
ಹುಚ್ಚು ನಾಯಿ ಸೆರೆ ಹಿಡಿಯಲು ನಗರಸಭೆ ಸಿಬ್ಬಂದಿ (Hassan City Municipal Council) ಹುಡುಕಾಟ ನಡೆಸಿದ್ದಾರೆ. ಆದರೆ ನಾಯಿ ಪತ್ತೆಯಾಗಿಲ್ಲ. ಹುಚ್ಚು ನಾಯಿ ಕಾಟದಿಂದ ಮನೆಯಿಂದ ಹೊರಗೆ ಬರಲು ನಿವಾಸಿಗಳು ಹೆದರುತ್ತಿದ್ದಾರೆ. ಅಲ್ಲದೇ ನಾಯಿಗಳ ಹಾವಳಿಗೆ ಕಡಿವಾಣ ಹಾಕದ ನಗರಸಭೆಯ ವಿರುದ್ಧ ಸಿದ್ದಯ್ಯನಗರದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಡಾವಣೆಯ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದು ಹುಚ್ಚು ನಾಯಿ ದಾಳಿಗೆ ಒಳಗಾಗಿರುವವರೆ ಸೂಕ್ತ ಚಿಕಿತ್ಸೆ ಹಾಗೂ ಚಿಕಿತ್ಸಾ ವೆಚ್ಚವನ್ನು ಭರಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಅಲ್ಲದೇ ಹಾಸನ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು ಇದಕ್ಕೆ ಶೀಘ್ರದಲ್ಲಿಯೇ ಕಡಿವಾಣ ಹಾಕಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಿಮ್ಮ ಮಗ ವಿದೇಶಕ್ಕೆ ಹೋಗುವಾಗ ನಿಮ್ಮ ಅನುಮತಿ ಪಡೆದಿದ್ದರೇ – ಸಿಎಂಗೆ ಹೆಚ್‍ಡಿಕೆ ಪ್ರಶ್ನೆ