ಕೋಲ್ಕತ್ತಾ: ಅಮ್ಮಾ, ನಾನು ಚಿಪ್ಸ್ ಕದ್ದಿಲ್ಲಮ್ಮಾ ಎಂದು ಡೆತ್‌ನೋಟ್ ಬರೆದಿಟ್ಟು 7ನೇ ತರಗತಿ ವಿದ್ಯಾರ್ಥಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಶ್ಚಿಮ ಬಂಗಾಳದ (West Bengal) ಮೇದಿನಿಪುರದಲ್ಲಿ ನಡೆದಿದೆ.
ಮೃತ ಬಾಲಕ ಪನ್ಸ್ಕುರಾದ ಬಕುಲ್ಡಾ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ 13 ವರ್ಷದ ಕೃಷ್ಣೇಂದು ದಾಸ್ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ‘ಸಿಂಧೂರ’ ಆಯ್ತು, ಈಗ ಭಗವದ್ಗೀತೆ ಶ್ಲೋಕ- ಭಾರತೀಯ ಸಂಸ್ಕೃತಿ ಪ್ರದರ್ಶಿಸಿದ ಐಶ್ವರ್ಯಾ ರೈ!
ಈ ಕುರಿತು ಮೃತ ಬಾಲಕನ ಕುಟುಂಬಸ್ಥರು ಮಾಹಿತಿ ನೀಡಿದ್ದು, ಕಳೆದ ಭಾನುವಾರ ತಿಂಡಿ ಖರೀದಿಸಲೆಂದು ಬಾಲಕ ಅಂಗಡಿಗೆ ಹೋಗಿದ್ದ. ಆ ಸಮಯದಲ್ಲಿ ಅಂಗಡಿಯಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಅಂಗಡಿಯ ಹೊರಗಿದ್ದ ಚಿಪ್ಸ್ ಪ್ಯಾಕೆಟ್ ನೋಡಿ, ಅದನ್ನು ಎತ್ತಿಕೊಂಡು ಹೋಗಿದ್ದಾನೆ ಎಂದು ತಿಳಿಸಿದ್ದಾರೆ.
ಅಂಗಡಿಯ ಬಳಿ ಹೋದ ಬಾಲಕ ಚಿಪ್ಸ್ ಕೊಡುವಂತೆ ಮಾಲೀಕನ ಬಳಿ ಕೇಳಿದ್ದಾನೆ. ಆದರೆ ಯಾವುದೇ ಪ್ರತಿಕ್ರಿಯೆ ಬರದ ಕಾರಣ ಅಂಗಡಿಯಲ್ಲಿ ಯಾರು ಇಲ್ಲ ಎಂದುಕೊಂಡು ಹಾಗೆಯೇ ಹೊರಟಿದ್ದ. ಆಗ ಕಾಲು ಬಳಿ ಬಿದ್ದಿದ್ದ ಚಿಪ್ಸ್ ಪ್ಯಾಕೆಟ್‌ಗಳನ್ನು ಎತ್ತಿಕೊಂಡಿದ್ದ. ಇದನ್ನು ನೋಡಿದ್ದೇ ತಡ ಮಾಲೀಕ ಸೈಕಲ್‌ನಲ್ಲಿ ಆತನನ್ನು ಬೆನ್ನಟ್ಟಿಸಿಕೊಂಡು ಹೋಗಿದ್ದಾನೆ. ಆಗ ಬಾಲಕ ಮಾಲೀಕನಿಗೆ ಕ್ಷಮೆ ಕೇಳಿ, 15 ರೂ. ಚಿಪ್ಸ್ ಪ್ಯಾಕೆಟ್‌ಗೆ 20 ರೂ. ನೀಡಿದ್ದ. ಬಳಿಕ ಬಾಲಕನನ್ನು ಅಂಗಡಿಗೆ ಎಳೆದುಕೊಂಡ ಹೋದ ಮಾಲೀಕ, ಇನ್ನುಳಿದ ಚಿಲ್ಲರೆ ಹಣವನ್ನು ನೀಡಿದ್ದಾನೆ. ಆದರೂ ಕೂಡ ಬಾಲಕನನ್ನು ಬಿಡದೇ ಸಾರ್ವಜನಿಕರ ಮುಂದೆ ಎಳೆದೊಯ್ದು, ಕಪಾಳಮೋಕ್ಷ ಮಾಡಿ ರಸ್ತೆಯಲ್ಲಿಯೇ ಅವಮಾನಿಸಿದ್ದ. ಜೊತೆಗೆ ಕಿವಿ ಹಿಡಿದು ಕ್ಷಮೆಯಾಚಿಸುವಂತೆ ತಿಳಿಸಿದ್ದ ಎಂದು ಮೂಲಗಳು ತಿಳಿಸಿವೆ.
ಈ ಘಟನೆಯ ಬಗ್ಗೆ ತಿಳಿದ ಮೃತ ಬಾಲಕನ ತಾಯಿ, ಮತ್ತೆ ಆತನನ್ನು ಅಂಗಡಿಯ ಬಳಿ ಕರೆದೊಯ್ದು ಗದರಿಸಿದ್ದರು. ಮನೆಗೆ ಬಂದವನೇ ಬಾಗಿಲು ಹಾಕಿಕೊಂಡು ಕೋಣೆಯೊಳಗೆ ಹೋಗಿ, ಅಮ್ಮಾ, ನಾನು ಚಿಪ್ಸ್ ಕದ್ದಿಲ್ಲಮ್ಮಾ. ನನ್ನನ್ನು ಕ್ಷಮಿಸು ಎಂದು ಬರೆದಿಟ್ಟು, ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ಬಳಿಕ ಬಾಲಕನನ್ನು ತಮ್ಲುಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಸಾವನ್ನಪ್ಪಿದ್ದಾನೆ.
ಸದ್ಯ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಂಗಡಿಯ ಮಾಲೀಕನಿಗೆ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡುವಂತೆ ಕೇಳಿಕೊಂಡಿದ್ದು, ಆತ ನಿರಾಕರಿಸಿದ್ದಾನೆ. ಜೊತೆಗೆ ಕರೆಗೂ ಪ್ರತಿಕ್ರಿಯೆ ನೀಡುತ್ತಿಲ್ಲ. ಸದ್ಯ ನಾಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇನ್ನೂ ಈ ಕುರಿತು ಸ್ಥಳೀಯರು ಆಕ್ರೋಶ ಹೊರಹಾಕಿದ್ದು, ಅಂಗಡಿಯ ಮಾಲೀಕ ಬಾಲಕನ ಜೊತೆ ನಡೆದುಕೊಂಡ ರೀತಿ ಹಾಗೂ ಸಾರ್ವಜನಿಕ ಮುಂದೆ ಆತನನ್ನು ಅವಮಾನಿಸಿದ್ದಾನೆ ಎಂದು ಆರೋಪಿಸಿದ್ದಾರೆ.ಇದನ್ನೂ ಓದಿ: ಮೇ 25ರಂದು UPSC ಪೂರ್ವಭಾವಿ ಪರೀಕ್ಷೆ – 1 ಗಂಟೆ ಮುಂಚಿತವಾಗಿ ಮೆಟ್ರೋ ಸೇವೆ ಶುರು