ಹಾಸನ: ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ವಿರುದ್ಧ ಸ್ಪರ್ಧೆ ಕಷ್ಟ ಎಂದು ಅನಿಸುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ಎಂ.ಶಂಕರ್ ಮನಸ್ಥೈರ್ಯ ವ್ಯಕ್ತಪಡಿಸಿದರು.
ಹಾಸನದಲ್ಲಿ ತಮ್ಮ ಸ್ಪರ್ಧೆ ಬಗ್ಗೆ ಖಚಿತಪಡಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ವಿರುದ್ಧ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ನಾನು ನವೆಂಬರ್ 23 ರಂದು ನಮ್ಮ ಕಾಂಗ್ರೆಸ್ ಪಕ್ಷದ ನಾಯಕರು, ಜಿಲ್ಲೆಯ ಜನರ ಜೊತೆ ನಾಮಪತ್ರ ಸಲ್ಲಿಸುತ್ತೇನೆ. ನಾನು 30 ವರ್ಷದಿಂದ ಕಾಂಗ್ರೆಸ್ ನಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ್ದೇನೆ. ಹೀಗಾಗಿ ದೇವೇಗೌಡರ ಕುಟುಂಬದ ವಿರುದ್ಧ ಸ್ಪರ್ಧೆ ಕಷ್ಟ ಅಂತ ಅನಿಸುತ್ತಿಲ್ಲ ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಹೊಸ ಕೃಷಿ ಕಾಯ್ದೆ ಬಗ್ಗೆ ರೈತರಿಗೆ ತಿಳಿ ಹೇಳುವಲ್ಲಿ ವಿಫಲರಾಗಿದ್ದೇವೆ: ಗೋವಿಂದ ಕಾರಜೋಳ
ನಾವು ಬೂತ್ ಮಟ್ಟದಿಂದ ಕೆಲಸ ಮಾಡಿಕೊಂಡು ಬಂದಿದ್ದೇವೆ. ಕಾರ್ಯಕರ್ತರು, ಮುಖಂಡರು ನಮ್ಮ ಪರ ಗಟ್ಟಿಯಾಗಿ ನಿಲ್ಲುತ್ತಾರೆ. ಜನ ಕೂಡ ಬದಲಾವಣೆ ಬಯಸುತ್ತಿದ್ದಾರೆ. ದೇವೇಗೌಡರ ಕುಟುಂಬದ ವಿರುದ್ಧ ಯಾರಿಗೆ ಮತ ಹಾಕಬೇಕು ಎಂದು ಮತದಾರರು ತೀರ್ಮಾನಿಸುತ್ತಾರೆ. ಈ ಚುನಾವಣೆಯಲ್ಲಿ ಮತ ಹಾಕುವವರು ಸಾಮಾನ್ಯ ಜನರಲ್ಲ. ಈಗಾಗಲೇ ಚುನಾಯಿತರಾದ ಪ್ರತಿನಿಧಿಗಳು ಮತ ಚಲಾಯಿಸುತ್ತಾರೆ. ಅವರು ಯೋಚಿಸಿ ಮತ ಹಾಕುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಹಾಸನ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಎಂಎಲ್‍ಸಿ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ, ಹೆಚ್.ಡಿ.ರೇವಣ್ಣ ಅವರ ಮಗ ಸೂರಜ್ ರೇವಣ್ಣ ನಾಮಪತ್ರ ಸಲ್ಲಿಸಿರುವುದರಿಂದ ಹಾಸನ ಕ್ಷೇತ್ರದ ಎಂಎಲ್‍ಸಿ ಚುನಾವಣೆ ಎಲ್ಲರ ಗಮನ ಸೆಳೆಯುತ್ತಿದೆ. ಇದನ್ನೂ ಓದಿ: ರಸ್ತೆಯಲ್ಲಿದ್ದ ಸಸಿ ಕಿತ್ತುಕೊಂಡು ನೆಟ್ಟಿಗರ ಕಣ್ಣಿಗೆ ಗುರಿಯಾದ ಮಹಿಳೆಯರು – ವೀಡಿಯೋ ವೈರಲ್