ಚಿಕ್ಕಮಗಳೂರು: ಬಿಜೆಪಿ (BJP) ರಾಜ್ಯಾಧ್ಯಕ್ಷರ ಸ್ಥಾನದಿಂದ ವಿಜಯೇಂದ್ರ (B.Y Vijayendra) ಅವರನ್ನು ಬದಲಾಯಿಸುವುದು ಯತ್ನಾಳ್ ( Basangouda Patil Yatnal) ಅವರ ಹಣೆಯಲ್ಲಿ ಬರೆದಿಲ್ಲ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ (M.P Renukacharya) ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಮಗಳೂರಿನಲ್ಲಿ (Chikkamagaluru) `ಪಬ್ಲಿಕ್ ಟಿವಿ’ ಜೊತೆ ಅವರು ಮಾತನಾಡಿದರು. ಈ ವೇಳೆ, ಯತ್ನಾಳ್ ಹೆಸರು ಹೇಳುವುದನ್ನು ನಾನು ಬಯಸುವುದಿಲ್ಲ. ಅವರು ಸವಕಲು ನಾಣ್ಯ, ಸಮುದಾಯಕ್ಕೂ ಬೇಡವಾದ ವ್ಯಕ್ತಿ ಎಂದು ವ್ಯಂಗ್ಯವಾಡಿದ್ದಾರೆ.
ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮುಂದುವರೆಯುವುದು ಸೂರ್ಯ ಚಂದ್ರ ಇರುವುಷ್ಟೇ ಸತ್ಯ. ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸುತ್ತೇವೆ. ರಾಜ್ಯಾಧ್ಯಕ್ಷರ ಬದಲಾವಣೆ ಮಾಡ್ತೀವಿ ಎನ್ನುತ್ತಿರುವವರ ಹಣೆಯಲ್ಲೂ ಅದು ಬರೆದಿಲ್ಲ. ತಾಕತ್ತಿದ್ದರೆ ರಾಜ್ಯಾಧ್ಯಕ್ಷ ಬದಲಾವಣೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ನಮ್ಮ ಹೈಕಮಾಂಡ್ ವಿಜಯೇಂದ್ರ ಅವರ ಪರವಾಗಿದೆ. ಎಲ್ಲಾ ಸಮುದಾಯದವರು ಅವರ ಜೊತೆಗಿದ್ದಾರೆ. ಯತ್ನಾಳ್ ಪರ ಯಾರಿದ್ದಾರೆ? ಸೊರಬದಲ್ಲಿ ಐದಾರು ಜನ ಇದ್ದಾರೆ. ವಿಜಯೇಂದ್ರ ಅವರು ಸಮರ್ಥ ರಾಜ್ಯಧ್ಯಕ್ಷ ಎಂದು ಅವರು ಹೇಳಿದ್ದಾರೆ.