ದಾವಣಗೆರೆ: ಬೆಳಗಾವಿಯಲ್ಲಿ (Belagavi) ಪಂಚಮಸಾಲಿ ಮೀಸಲಾತಿ (Panchamasali Reservation) ಹೋರಾಟಗಾರರ ಮೇಲೆ ಗೋಲಿ ಬಾರ್ ಮಾಡಲು ಸಂಚು ಮಾಡಲಾಗಿತ್ತು. ಈ ಮೂಲಕ ಹೋರಾಟ ನಿಲ್ಲಿಸಲು ಜಯಮೃತ್ಯುಂಜಯ ಸ್ವಾಮೀಜಿಗಳನ್ನು (JayaMrityunjaya Swamiji ) ಮುಗಿಸಲು ಪ್ಲ್ಯಾನ್ ನಡೆದಿತ್ತು ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ (M.P.Renukacharya) ಆರೋಪಿಸಿದ್ದಾರೆ.
ದಾವಣಗೆರೆಯಲ್ಲಿ (Davanagere) ಅವರು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಪಂಚಮಸಾಲಿ ಹೋರಾಟಗಾರರ ಮೇಲಿನ ಲಾಠಿ ಚಾರ್ಜ್ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಪ್ರತಿಕ್ರಿಯಿಸಿದರು. ಸ್ವಾಮೀಜಿ ಮುಗಿಸಿದ್ರೆ ಹೋರಾಟ ನಿಲ್ಲುತ್ತೆ ಎಂದು ಗೋಲಿ ಬಾರ್ ಮಾಡಲು ಪ್ಲ್ಯಾನ್ ನಡೆದಿತ್ತು ಎಂದು ಬಾಂಬ್ ಸಿಡಿಸಿದ್ದಾರೆ.
ಚನ್ನಮ್ಮ ವಂಶಸ್ಥರ ಮೇಲೆ ನಡೆದ ಲಾಠಿ ಚಾರ್ಜ್‍ನ್ನು ಖಂಡಿಸಬೇಕು. ಇಲ್ಲವಾದರೆ ನಮಗೂ ಕೂಡ ಉಳಿಗಾಲವಿಲ್ಲದಂತಾಗುತ್ತದೆ. ನಾವು ಪಂಚಮಸಾಲಿ ಸಮುದಾಯದ ಜೊತೆ ಗಟ್ಟಿಯಾಗಿದ್ದೇವೆ. ಸಮುದಾಯದವರ ಮೇಲಿನ ದಾಳಿಯನ್ನು ಎಲ್ಲಾ ಮಠಾಧೀಶರು ಖಂಡಿಸಬೇಕು. ಮೀಸಲಾತಿ ಅವರ ಹಕ್ಕು, ಅದನ್ನು ಅವರು ಕೇಳುತಿದ್ದಾರೆ ಎಂದಿದ್ದಾರೆ.
ಲಾಠಿ ಚಾರ್ಜ್ ವಿಚಾರವಾಗಿ ಗೃಹ ಸಚಿವ ಜಿ.ಪರಮೇಶ್ವರ್ ಹಗುರವಾಗಿ ಮಾತನಾಡಿದ್ದಾರೆ. ಅವರನ್ನು ಸಂಪುಟದಿಂದ ವಜಾ ಮಾಡಬೇಕು. ಲಾಠಿ ಚಾರ್ಜ್ ಮಾಡುವ ಬದಲು ಮುತ್ತು ಕೊಡಬೇಕಾ ಅಂತ ಕೇಳ್ತಾರೆ. ಮುತ್ತು ಕೊಡು ಎಂದು ಕೇಳಿದ್ದಾರಾ? ಹೋರಾಟಗಾರರು ಇರುವಲ್ಲಿಗೆ ಹೋಗಿ ಅವರ ಮನವಿಯನ್ನ ಕೇಳಬೇಕಿತ್ತು ಎಂದು ಕಿಡಿಕಾರಿದ್ದಾರೆ.
ಆರ್‍ಎಸ್‍ಎಸ್‍ನವರು ಹೋರಾಟದಲ್ಲಿ ಕಲ್ಲು ತೂರಿದ್ದಾರೆ ಎಂಬ ಖಾಶಪ್ಪನವರ ಹೇಳಿಕೆ ವಿಚಾರವಾಗಿ, ಹೋರಾಟ ಹತ್ತಿಕ್ಕಲು ಅವರೇ ಕಲ್ಲು ತೂರಿರಬಹುದು. ಅಧಿಕಾರದ ಪಿತ್ತ ನೆತ್ತಿಗೇರಿ ಈ ರೀತಿ ಮಾತನಾಡುತಿದ್ದಾರೆ. ನಮ್ಮ ಸರ್ಕಾರ ಇರುವ ಸಮಯದಲ್ಲಿ ಒಂದು ಕೂಡ ಅಹಿತಕರ ಘಟನೆ ನಡೆಯಲಿಲ್ಲ. ನೀವು ಈ ರೀತಿ ಮಾತನಾಡೋದು ಸರಿಯಲ್ಲ. ಈ ಬಗ್ಗೆ ಕ್ಷೀಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರಿಗೆ ಮುಸ್ಲಿಂ ಸಮುದಾಯ ಮೇಲೆ ವ್ಯಾಮೋಹ ಜಾಸ್ತಿ. ಕಾವಿ ಬಟ್ಟೆ ಹಾಕಿಕೊಂಡವರ ಮೇಲೆ ಅವರಿಗೆ ಅಷ್ಟ್ಯಾಕೆ ಸಿಟ್ಟು? ಎಂದು ಲಾಠಿ ಚಾರ್ಜ್ ನಡೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.