ಬಿಎಸ್‍ವೈರನ್ನ ಹಾಡಿ ಹೊಗಳಿದ ಶಾಸಕ ರೇಣುಕಾಚಾರ್ಯ

Public TV
1 Min Read
M.P.Renukacharya BSY

– ಲಕ್ಷ್ಮಣ ಸವದಿಗೆ ಈಗ ಸಚಿವ ಸ್ಥಾನ ಕೊಟ್ಟಿದ್ದು ಸರಿಯಲ್ಲ

ತುಮಕೂರು: 12ನೇ ಶತಮಾನದಲ್ಲಿ ಅಣ್ಣ ಬಸವಣ್ಣ ಇದ್ದರು. 21ನೇ ಶತಮಾನದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಇದ್ದಾರೆ. ಅವರು ಆಧುನಿಕ ಬಸವಣ್ಣನವರು ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ಸಿದ್ದಗಂಗಾ ಮಠಕ್ಕೆ ಭೇಟಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪನವರು ಸಿಎಂ ಆದ ಬಳಿಕ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಅವರು ಧರ್ಮವನ್ನು ನಂಬಿದವರು. ಬಿಎಸ್‍ವೈರ ಮೇಲೆ ನಾಡಿನ ಮಠಾಧೀಶರ ಹಾಗೂ ಜನರ ಆಶೀರ್ವಾದ ಇದೆ. ಯಡಿಯೂರಪ್ಪನವರು ಮೂರು ವರ್ಷ ಹತ್ತು ತಿಂಗಳು ಆಡಳಿತ ನೀಡಲಿ, ಅವರ ಆರೋಗ್ಯ ಚೆನ್ನಾಗಿರಲಿ. 2023ರ ಚುನಾವಣೆ ಬಳಿಕ ಅವರೇ ಮುಖ್ಯಮಂತ್ರಿ ಆಗಬೇಕು ಎಂದರು.

M.P.Renukacharya

ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರ ಮನೆಗೆ ಭೇಟಿ ನೀಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಬಿ.ಎಸ್.ಯಡಿಯೂರಪ್ಪ ಅವರನ್ನ ಸಿಎಂ ಮಾಡಬೇಕು ಅಂತ ಗುರಿಯಿತ್ತು. ಕುಮಾರಸ್ವಾಮಿ ಅವರನ್ನು ಕೆಳಗಿಳಿಸಿ ಒಬ್ಬ ರೈತ ನಾಯಕನನ್ನ ಸಿಎಂ ಆಗಿ ಮಾಡಲಾಗಿದೆ. ನಾನ್ಯಾಕೆ ಕುಮಾರಸ್ವಾಮಿ ಅವರ ಮನೆಗೆ ಹೋಗಲಿ? ಯಡಿಯೂರಪ್ಪನವರೇ ನಮ್ಮ ನಾಯಕ. ನಾನು ಪಕ್ಷ ಬಿಡುವ ಮಾತೇ ಇಲ್ಲ ಎಂದು ಸ್ಪಷ್ಟನೆ ನೀಡಿದರು.

ಲಕ್ಷ್ಮಣ ಸವದಿ ಅವರು ನನ್ನ ಆತ್ಮೀಯ ಸ್ನೇಹಿತರು. ಅವರು ಶಾಸಕರಲ್ಲದೆ ಇದ್ದರೂ ಈಗ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಅವರಿಗೆ ಈ ಸಂದರ್ಭದಲ್ಲಿ ಮಂತ್ರಿಗಿರಿ ಕೊಟ್ಟಿದ್ದು ಸರಿಯಲ್ಲ ಎಂಬುದು ನನ್ನ ಭಾವನೆ ಅಷ್ಟೇ. ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡಿರುವ ಬಗ್ಗೆ ನನ್ನಂತೆ ಪಕ್ಷದ ಅನೇಕರಿಗೆ ಬೇಸರವಿದೆ. ಆದರೆ ನಾನು ಇದನ್ನು ಬಹಿರಂಗವಾಗಿ ಹೇಳಿದ್ದೇನೆ. ಈ ಕುರಿತು ಬುಧವಾರ ಸಿಎಂ ಯಡಿಯೂರಪ್ಪ ಅವರ ಜೊತೆಗೂ ಮಾತನಾಡಿದ್ದೇನೆ ಎಂದು ಹೇಳಿದರು.

renukacharya laxman savadi

Share This Article
Leave a Comment

Leave a Reply

Your email address will not be published. Required fields are marked *