ನವದೆಹಲಿ: ರಾಜ್ಯಸಭೆ ಕಲಾಪದಲ್ಲಿ ತಮ್ಮ ಭಾಷಣಕ್ಕೆ ಅಡ್ಡಿಪಡಿಸಿದ ಬಿಜೆಪಿ ಸಂಸದ ನೀರಜ್ ಶೇಖರ್ (Neeraj Shekhar) ಅವರನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಬಜೆಟ್ ಅಧಿವೇಶನದ ಚರ್ಚೆಯ ಸಂದರ್ಭದಲ್ಲಿ ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದ ಬಗ್ಗೆ ಖರ್ಗೆ ಮಾತನಾಡುತ್ತಿದ್ದರು. ನರೇಂದ್ರ ಮೋದಿ (Narendra Modi) ಸರ್ಕಾರದ ಅಡಿಯಲ್ಲಿ ಡಾಲರ್ 87 ರೂ. ದಾಟಿದೆ. 2013 ರಲ್ಲಿ ಮೋದಿ ಗುಜರಾತ್‌ನ ಸಿಎಂ ಆಗಿದ್ದಾಗ ಡಾಲರ್ ಬೆಲೆ 60 ರೂ. ಇತ್ತು. ಅದಕ್ಕೇ ರೂಪಾಯಿ ಐಸಿಯುನಲ್ಲಿದೆ ಎಂದು ಮೋದಿ ಹೇಳಿದ್ದರು. ಈಗ 87 ರೂ. ಗಡಿ ದಾಟಿದೆಯಲ್ಲ.. ಏನು ಹೇಳ್ತಾರೆ ಅಂತ ಪ್ರಶ್ನೆ ಮಾಡಿದರು. ಈ ವೇಳೆ ನೀರಜ್, ಖರ್ಗೆ ಭಾಷಣಕ್ಕೆ ಅಡ್ಡಿಪಡಿಸಿದರು. ಇದರಿಂದ ಕೆಂಡಾಮಂಡಲವಾದ ಖರ್ಗೆ ಅವರು ತಾಳ್ಮೆ ಕಳೆದುಕೊಂಡರು.
ನಾನು ನಿಮ್ಮ ತಂದೆ ಸಮಕಾಲೀನರು, ಏನ್ ಮಾತನಾಡ್ತೀರಿ.. ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳಿ ಎಂದು ಗದರಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಸಭಾಪತಿ ಜಗದೀಪ್ ಧನಕರ್ ಅವರು ಇಬ್ಬರೂ ಸಂಯಮದಿಂದ ಇರುವಂತೆ ಹೇಳಿದರು. ಅಲ್ಲದೇ ಚಂದ್ರಶೇಖರ್ ದೇಶದ ಮಹಾನ್ ನಾಯಕರಲ್ಲಿ ಒಬ್ಬರು, ನಿಮ್ಮ ಹೇಳಿಕೆಯನ್ನು ಹಿಂಪಡೆಯುವಂತೆ ಖರ್ಗೆ ಅವರಿಗೆ ಹೇಳಿದರು. ಇದನ್ನೂ ಓದಿ: ಫೆ.10ಕ್ಕೆ ಬಿಜೆಪಿ ಲಿಂಗಾಯತ ರೆಬೆಲ್ ನಾಯಕರ ಸಭೆ? – ಬೊಮ್ಮಾಯಿ ನೇತೃತ್ವದಲ್ಲಿ ಮೀಟಿಂಗ್
ಖರ್ಗೆ ಸ್ಪಷ್ಟನೆ ಏನು?
ಸಭಾಪತಿಗಳು ಹೇಳಿಕೆ ಹಿಂಪಡೆಯುವಂತೆ ಹೇಳಿದ್ದಕ್ಕೆ ಸ್ಪಷ್ಟನೆ ನೀಡಿದ ಮಲ್ಲಿಕಾರ್ಜುನ ಖರ್ಗೆ, ನಾನು ಯಾರನ್ನೂ ನಿಂದಿಸಿಲ್ಲ, ನಿಂದಿಸುವುದು ನನ್ನ ಅಭ್ಯಾಸವೂ ಅಲ್ಲ. ಆದ್ರೆ ಬಿಜೆಪಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಅವಮಾನಿಸಿದೆ. ಮನಮೋಹನ್ ಸಿಂಗ್ ಅವರು ಸ್ನಾನ ಮಾಡುವಾಗ ರೇನ್‌ಕೋಟ್ ಧರಿಸುತ್ತಾರೆ ಎಂದು ಈ ಹಿಂದೆ ಒಬ್ಬರು ಹೇಳಿದ್ದರು. ಆದಾಗ್ಯೂ ಮನಮೋಹನ್ ಸಿಂಗ್ ಅವರು ದೇಶದ ಹಿತಾಸಕ್ತಿಗಾಗಿ ಮೌನವಾಗಿದ್ದರು. ಅದಕ್ಕಾಗಿ ಅವರನ್ನ ಮೌನಿ ಬಾಬಾ ಎಂದೂ ಅವಮಾನ ಮಾಡಲಾಯಿತು. ಅವಮಾನ ಮಾಡುವ ಅಭ್ಯಾಸ ಅವರದ್ದು ಎಂದು ದೂರಿದರು.
ಶೇಖರ್ ಅವರ ವಿರುದ್ಧ ಖರ್ಗೆ ಅವರ ಆಕ್ರೋಶ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಬಿಜೆಪಿ ಸದಸ್ಯರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇದನ್ನೂ ಓದಿ: ಮಹಾ ಕುಂಭಮೇಳ – ರುದ್ರಾಕ್ಷಿ ಮಾಲೆ ಧರಿಸಿ ತ್ರಿವೇಣಿ ಸಂಗಮದಲ್ಲಿ ಮೋದಿ ಪುಣ್ಯಸ್ನಾನ
ನೀರಜ್ ಶೇಖರ್ ಯಾರು?
ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಪುತ್ರ ನೀರಜ್ ಶೇಖರ್ ಈ ಮೊದಲು ಸಮಾಜವಾದಿ ಪಕ್ಷದಲ್ಲಿ ಸಂಸದರಾಗಿದ್ದರು. ಬಳಿಕ 2019ರಲ್ಲಿ ಬಿಜೆಪಿ ಸೇರ್ಪಡೆಯಾದರು. ನೀರಜ್ ಅವರ ತಂದೆ ಚಂದ್ರಶೇಖರ್ ಸಮಾಜವಾದಿ ಪಕ್ಷದ ಅಗ್ರ ನಾಯಕರಲ್ಲಿ ಒಬ್ಬರು, ಅಕ್ಟೋಬರ್ 1990 ರಿಂದ ಜೂನ್ 1991ರ ವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಇದನ್ನೂ ಓದಿ: Delhi Election 2025 | ಕೊರೆವ ಚಳಿ ಲೆಕ್ಕಿಸದೇ ಬೆಳ್ಳಂಬೆಳಗ್ಗೆ ಸಂಸದ ರಾಹುಲ್ ಗಾಂಧಿ ಮತದಾನ