ವಿಜಯಪುರ: ತಾವು ಓಡಾಡೋ ಮಾರ್ಗದಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆ ಬೇಡ, ನಾನು ಸಾರ್ವಜನಿಕರಂತೆ ಟ್ರಾಫಿಕ್ ನಿಯಮ ಪಾಲಿಸುತ್ತೇನೆ ಎನ್ನುವ ಮೂಲಕ ನೂತನ ಗೃಹ ಸಚಿವ ಎಂ.ಬಿ.ಪಾಟೀಲ್ ಸರಳತೆಗೆ ಸಾಕ್ಷಿಯಾಗಿದ್ದಾರೆ.
ದಿನ ನಿತ್ಯ ನಾನು ಸಂಚರಿಸುವ ಮಾರ್ಗದಲ್ಲಿ ಝೀರೊ ಟ್ರಾಫಿಕ್ ವ್ಯವಸ್ಥೆ ಬೇಡ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ಇದು ನನಗೆ ಇಷ್ಟವಿಲ್ಲ. ಸಾರ್ವಜನಿಕರಂತೆ ನಾನು ಕೂಡ ಟ್ರಾಫಿಕ್ ನಿಯಮ ಪಾಲಿಸುತ್ತೇನೆ ಎಂದಿದ್ದಾರೆ. ಹಾಗೆಯೇ ತಮ್ಮ ವಾಸ್ತವ್ಯದ ಸ್ಥಳದಲ್ಲಿ ಮತ್ತು ಕಾರ್ಯಕ್ರಮಗಳ ಸ್ಥಳಗಳಲ್ಲಿ ರಕ್ಷಣೆಗಾಗಿ ಅನವಶ್ಯಕ ಸಿಬ್ಬಂದಿಯನ್ನು ನಿಯೋಜನೆ ಮಾಡುವುದು ಬೇಡ ಎಂದು ಸೂಚನೆಯನ್ನು ನೀಡಿದ್ದಾರೆ. ಇದನ್ನೂ ಓದಿ: ನೆಲಮಂಗಲದಲ್ಲಿ ಟ್ರಾಫಿಕ್ ಜಾಮ್ – ಸಿದ್ದರಾಮಯ್ಯ ನಡೆಗೆ ಜನರ ಮೆಚ್ಚುಗೆ
ಸಚಿವರ ಸೂಚನೆ ಮೆರೆಗೆ ಗೃಹ ಇಲಾಖೆಯಿಂದ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಕಮಲ್ ಪಂತ್ ಎಲ್ಲಾ ಜಿಲ್ಲೆಯ ಎಸ್ಪಿಗಳಿಗೆ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಆಗಬಾರದೆಂದು ಯೋಚಿಸಿ ಈ ನಿಲುವನ್ನು ತೆಗೆದುಕೊಂಡ ಎಂ.ಬಿ ಪಾಟೀಲ್ ಅವರ ಸರಳತೆಗೆ ಜನರು ಬಹುಪರಾಕ್ ಅಂತಿದ್ದಾರೆ. ಇದನ್ನೂ ಓದಿ: ಇರುವ ಅವಕಾಶ ಬಳಸಿಕೊಳ್ತಿದ್ದೇನೆ, ನಿಮಗೆ ಹೊಟ್ಟೆ ಉರಿ: ಝಿರೋ ಟ್ರಾಫಿಕ್‍ಗೆ ಡಿಸಿಎಂ ಸಮರ್ಥನೆ
ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಚಿವರು ತೆರಳುವಾಗ ಪೊಲೀಸರು ಝೀರೊ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು. ಇದನ್ನು ಗಮನಿಸುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಎಂಬಿಪಿ, ಯಾಕೆ ರಸ್ತೆ ಖಾಲಿ ಬಿಡಲಾಗಿದೆ? ಇದರಿಂದ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗುತ್ತದೆ. ಇಷ್ಟು ಸೂಕ್ಷ್ಮ ಪ್ರಜ್ಞೆಯೂ ಇಲ್ಲದಿದ್ದರೆ ಹೇಗೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv