ಬೆಂಗಳೂರು: ಸ್ಥಳೀಯವಾಗಿ ಉತ್ಪಾದನೆ ಸಾಧ್ಯವಾಗಿಸುವ ಕೈಗಾರಿಕಾ ಸಹಭಾಗಿತ್ವದ ಅಡಿ ಕರ್ನಾಟಕ ಮೂಲದ ರಿವರ್ ಮೊಬಿಲಿಟಿ ಕಂಪನಿ ತಯಾರಿಸಿರುವ Yamaha EC-06 ವಿದ್ಯುತ್ ಚಾಲಿತ ಬೈಕ್ ಅನ್ನು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಯಮಹಾ ಕಂಪನಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (MB Patil) ಅವರು ಇಲ್ಲಿನ ತಯಾರಿಕಾ ಘಟಕದಲ್ಲಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಗರ ಸಂಚಾರವನ್ನು ಪರಿಸರಸ್ನೇಹಿ, ಸುಗಮ ಮತ್ತು ಸುಸ್ಥಿರಗೊಳಿಸುವಂತಹ ಇಂತಹ ದ್ವಿಚಕ್ರ ವಾಹನ ತಯಾರಿಕೆ ಸ್ಥಳೀಯವಾಗಿಯೇ ಆಗುತ್ತಿರುವುದು ರಾಜ್ಯದ ಕೈಗಾರಿಕಾ ಬೆಳವಣಿಗೆಯಲ್ಲಿ ಒಂದು ಉಜ್ವಲ ಅಧ್ಯಾಯವಾಗಿದೆ. ಈ ಮೂಲಕ ರಾಜ್ಯವು ಭವಿಷ್ಯದ ಸಂಚಾರ ವ್ಯವಸ್ಥೆಯ ನಿರ್ಮಾಣವು ಸರಿಯಾದ ಪಥದಲ್ಲಿ ಸಾಗುತ್ತಿರುವುದಕ್ಕೆ ಅತ್ಯುತ್ತಮ ನಿದರ್ಶನವಾಗಿದೆ ಎಂದು ಬಣ್ಣಿಸಿದ್ದಾರೆ. ಇದೇ ವೇಳೆ ಅವರು ಕಂಪನಿಯ ತಯಾರಿಕಾ ವ್ಯವಸ್ಥೆ ಮತ್ತಿತರ ಸೌಲಭ್ಯಗಳನ್ನು ವೀಕ್ಷಿಸಿದರು. ಇದನ್ನೂ ಓದಿ: ನಾನೇ ಸಾಕಿದ ಗಿಣಿ ಹದ್ದಾಗಿ ಕುಕ್ಕಿತು – ಶಿವಲಿಂಗೇಗೌಡಗೆ ರೇವಣ್ಣ ತಿರುಗೇಟು
ಈ ಘಟಕದಲ್ಲಿ ವರ್ಷಕ್ಕೆ ಇಂತಹ ಉತ್ಕೃಷ್ಟ ಗುಣಮಟ್ಟದ 2 ಸಾವಿರ ಇ.ವಿ ಬೈಕ್ ತಯಾರಿಸಲಾಗುವುದು. ಇವುಗಳಿಗೆ ಇಲ್ಲೇ ತಯಾರಿಸುವ ಬ್ಯಾಟರಿ ಅಳವಡಿಸಲಾಗುವುದು. ಇದು 1 ಲಕ್ಷ ಕಿ.ಮೀ.ವರೆಗೂ ವಾಹನ ಓಡಿಸುವ ಸಾಮರ್ಥ್ಯ ಹೊಂದಿದೆ. ಇದಕ್ಕೆ 10 ವರ್ಷಗಳ ವ್ಯಾರಂಟಿ ಇರಲಿದೆ ಎಂದು ತಿಳಿಸಿದರು.
River Mobility Rolls Out Yamaha EC 06 Electric Scooter
Yet Another Leap in the State’s Clean Mobility Drive
I was delighted to be at River Mobility’s Hoskote facility for the production rollout of the Yamaha EC 06 electric scooter, a proud moment for Karnataka’s industrial… pic.twitter.com/h44kilpl9s
— M B Patil (@MBPatil) January 12, 2026
ಸ್ಥಳೀಯ ಉತ್ಪಾದನೆಯಿಂದ ವ್ಯಾಪಕ ಆರ್ಥಿಕ ಮೌಲ್ಯವೂ ಸೃಷ್ಟಿಯಾಗಲಿದೆ. ಇದು ಕೌಶಲ್ಯಪೂರ್ಣ ಉದ್ಯೋಗಗಳ ಸೃಷ್ಟಿ, ಸ್ಥಳೀಯ ಪೂರೈಕೆ ಸರಪಳಿ ಬಲವರ್ಧನೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪಾಲಿಗೆ ಸದವಕಾಶ ಇವೆಲ್ಲವನ್ನೂ ಸಾಧ್ಯವಾಗಿಸಲಿದೆ. ವಾಹನ ಮಾರುಕಟ್ಟೆ ಈಗ ವಿದ್ಯುತ್ ಚಾಲಿತ ವಾಹನಗಳತ್ತ ಹೋಗುತ್ತಿದೆ. ರಾಜ್ಯದಲ್ಲಿ ಕೂಡ ಇದನ್ನು ಗಮನಿಸಿ, ಈಗಾಗಲೇ ಸಾವಿರಾರು ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸಲಾಗಿದೆ. ಇವುಗಳ ಸಂಖ್ಯೆಯನ್ನು ಇನ್ನೂ ಹೆಚ್ಚಿಸಲಾಗುವುದು. ಇದು ಇ.ವಿ ವಲಯದ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರವು ಹೊಂದಿರುವ ಬದ್ಧತೆಯನ್ನು ಸೂಚಿಸುತ್ತದೆ ಎಂದು ಹೇಳಿದರು.
ಸಚಿವರು ಇಡೀ ಕಾರ್ಖಾನೆಯಲ್ಲಿ ಓಡಾಡಿ, ಬೈಕ್ ತಯಾರಿಕೆಯನ್ನು ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ಶಾಸಕ ಮತ್ತು ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಯಮಹಾ ಇಂಡಿಯಾ ಅಧ್ಯಕ್ಷ ಜಿಮ್ ಅಯೋಟಾ, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ರಿವರ್ ಸಿಇಒ ಅರವಿಂದ ಮಣಿ, ಸಹ ಸಂಸ್ಥಾಪಕ ವಿಪಿನ್ ಜಾರ್ಜ್ ಮುಂತಾದವರು ಉಪಸ್ಥಿತರಿದ್ದರು.ಇದನ್ನೂ ಓದಿ: 1947ರ ಬಳಿಕ ಫಸ್ಟ್ ಟೈಮ್ – ಮಕರ ಸಂಕ್ರಾಂತಿಯಂದು ಪ್ರಧಾನಿ ಮೋದಿ ಹೊಸ ಕಚೇರಿಗೆ ಶಿಫ್ಟ್



