ಚಿಕ್ಕಬಳ್ಳಾಪುರ: ಕರ್ನಾಟಕ ಚುನಾವಣೆಯ ದಿನಾಂಕ ಘೋಷಣೆಯಾಗಿ, ಚುನಾವಣಾ ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೇ ರಾಜ್ಯದಲ್ಲೇ ಮೊಟ್ಟ ಮೊದಲ ಪ್ರಕರಣವೊಂದು ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಸಿದ್ದರಾಮಯ್ಯ ಅವರು ಚಿಕ್ಕಬಳ್ಳಾಪುರದಿಂದ ಹೊರಟ ಕೂಡಲೇ ಜಿಲ್ಲಾ ಚುನಾವಣಾಧಿಕಾರಿಗಳು ಸಿಎಂ ಭೇಟಿ ನಿಮಿತ್ತ ಆಯೋಜಿಸಿದ್ದ ಬಾಡೂಟ ಸೀಜ್ ಮಾಡಿದ್ದಾರೆ.
ಕೋಚಿಮುಲ್ ನ ನಿರ್ದೇಶಕ ಹಾಗೂ ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷರಾಗಿದ್ದ ಕೆವಿ ನಾಗರಾಜ್ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ನಾಗರಾಜ್ `ಕೈ’ ಹಿಡಿದ್ರು. ಈ ಹಿನ್ನೆಲೆಯಲ್ಲಿ ಅವರು ಕಣಜೇನಹಳ್ಳಿ ಗ್ರಾಮದಲ್ಲಿ ಸುಮಾರು 3 ಸಾವಿರ ಮಂದಿಗೆ ಬಾಡೂಟ ಆಯೋಜನೆ ಮಾಡಿದ್ದರು.
ಆದ್ರೆ ಇತ್ತ ಚುನಾವಣಾ ದಿನಾಂಕ ಘೋಷಣೆಯಾದ ಬೆನ್ನಲ್ಲೇ ನೀತಿ ಸಂಹಿತೆ ಜಾರಿಯಾಗಿದ್ದು, ಮೆಗಾಡೈರಿ ಉದ್ಘಾಟನೆಗೆ ತೆರಳಿದ್ದ ಮುಖ್ಯಮಂತ್ರಿ ಅವರು ಉದ್ಘಾಟನೆ ಮಾಡದೇ ಅಲ್ಲಿಂದ ನಾಗರಾಜ್ ಮನೆಗೆ ತೆರಳಿದ್ದಾರೆ. ಸಿಎಂ ಭೇಟಿ ಹಿನ್ನೆಲೆಯಲ್ಲಿ ನಾಗರಾಜ್ ಮನೆಯಲ್ಲಿ ಬಾಡೂಟ ಆಯೋಜನೆ ಮಾಡಿದ್ದರು.
ಸಿಎಂ ಅವರು ಮನೆಯಿಂದ ವಾಪಸ್ಸಾಗುತ್ತಿದ್ದಂತೆಯೇ ಚಿಕ್ಕಬಳ್ಳಾಪುರ ಜಿಲ್ಲಾ ಚುನಾವಣಾಧಿಕಾರಿಗಳು ನಾಗರಾಜ್ ಮನೆಗೆ ದಾಳಿ ನಡೆಸಿ ಬಾಡೂಟ ಸೀಜ್ ಮಾಡಿದ್ದಾರೆ. ಅಧಿಕಾರಿಗಳು ಬರುತ್ತಿದ್ದಂತೆಯೇ ಬಾಡೂಟ ಸವಿಯುತ್ತಿದ್ದವರು ದಿಕ್ಕಾಪಾಲಾಗಿ ಓಡಿದ್ದಾರೆ.