– ರಕ್ತಚಂದ್ರ ಗ್ರಹಣ ವೀಕ್ಷಣೆ ಹೇಗೆ?
ಬೆಂಗಳೂರು: ಇಂದು ಸಂಪೂರ್ಣ ರಕ್ತಚಂದ್ರಗ್ರಹಣ (Chandra Grahan) ಸಂಭವಿಸಲಿದೆ. ನಭೋಮಂಡಲದ ಈ ವಿಸ್ಮಯದ ಅದ್ಭುತ ಕಣ್ತುಂಬಿಕೊಳ್ಳಲು ಜನರು ಕಾತರರಾಗಿದ್ದಾರೆ. ಬೆಳದಿಂಗಳ ಚಂದಿರ ಅದ್ಯಾಕೆ ಇಂದು ಗ್ರಹಣದ ದಿನ ರಕ್ತ ವರ್ಣದಲ್ಲಿ ಕಾಣಿಸಲಿದ್ದಾನೆ? ಇದರ ವೈಜ್ಞಾನಿಕ ಕಾರಣಗಳೇನು?
ಚಂದಿರನೇಕೆ ರಕ್ತವರ್ಣದಲ್ಲಿ ಕಂಗೊಳಿಸಲಿದ್ದಾನೆ?
ಚಂದ್ರಗ್ರಹಣ ಸೂರ್ಯ ಮತ್ತು ಚಂದ್ರರ ನಡುವೆ ಭೂಮಿ ನಿಖರವಾಗಿ ಬಂದಾಗ ಸಂಭವಿಸುತ್ತದೆ. ಭೂಮಿಯ ನೆರಳು ಕೆಲ ಕಾಲ ಚಂದಿರನ ಮೇಲೆ ಬೀಳುವುದರಿಂದ ಅದು ಮರೆಯಾಗುತ್ತದೆ. ಭೂಮಿಯ ನೆರಳಿನಲ್ಲಿ ಎರಡು ಭಾಗ ಇದೆ. ಒಂದು ಗಾಢ ಕತ್ತಲೆಯ ಭಾಗ, ಇದನ್ನು ಅಂಬ್ರಾ ಎನ್ನಲಾಗುತ್ತದೆ. ಹೊರಗಿನ ಮಬ್ಬಾದ ಭಾಗವನ್ನು ಪೆನಾಂಬ್ರಾ ಎನ್ನಲಾಗುತ್ತದೆ. ಚಂದ್ರನು ಸಂಪೂರ್ಣವಾಗಿ ಅಂಬ್ರಾ ನೆರಳಿನೊಳಗೆ ಪ್ರವೇಶಿಸುವಾಗ ಸಂಪೂರ್ಣವಾಗಿ ಚಂದ್ರ ತಾಮ್ರವರ್ಣದ ಅಥವಾ ಗಾಢ ಕೆಂಪುಬಣ್ಣದಲ್ಲಿ ಕಾಣಿಸುತ್ತಾನೆ. ಇದನ್ನೂ ಓದಿ: ಚಂದ್ರಗ್ರಹಣ ಕಣ್ತುಂಬ ನೋಡಿ ಸಂಭ್ರಮಿಸಿ: ಭೌತವಿಜ್ಞಾನಿ ಎ.ಪಿ.ಭಟ್
ಬಣ್ಣ ಬದಲಾವಣೆ ಪ್ರಕ್ರಿಯೆ ಯಾವಾಗ ಆರಂಭ?
ಸೆಪ್ಟೆಂಬರ್ 7 ರಂದು ರಾತ್ರಿ 9:57ಕ್ಕೆ ಚಂದ್ರ ಭೂಮಿಯ ಗಾಢ ನೆರಳಾದ ಅಂಬ್ರಾ ಒಳಗೆ ಪ್ರವೇಶಿಸಲು ಆರಂಭಿಸುತ್ತಾನೆ. ನಂತರ ಚಂದ್ರ ಹೆಚ್ಚಿನ ಭಾಗ ಭೂಮಿಯ ನೆರಳಿನಿಂದ ಅವರಿಸಲ್ಪಡಿಸುತ್ತ 11:01ಕ್ಕೆ ಸಂಪೂರ್ಣವಾಗಿ ಅಂಬ್ರಾದೊಳಗೆ ಸೇರುತ್ತದೆ.
ರಕ್ತಚಂದ್ರ ಗ್ರಹಣ ವೀಕ್ಷಣೆ ಹೇಗೆ?
ಚಂದ್ರಗ್ರಹಣ ವೀಕ್ಷಣೆಗೆ ಯಾವ ಸಾಧನ ಬೇಕಾಗಿಲ್ಲ. ಬರಿಗಣ್ಣಿನಲ್ಲಿ ನೋಡಬಹುದು. ಆದರೆ, ದೂರದರ್ಶಕ, ದುರ್ಬಿನು ಬಳಸಿದರೆ ವೀಕ್ಷಣೆಯ ಅನುಭವ ಇನ್ನಷ್ಟು ಸುಂದರವಾಗುತ್ತದೆ. ಇದನ್ನೂ ಓದಿ: ರಕ್ತಚಂದ್ರಗ್ರಹಣ – ಬೀದರ್‌ನ ಐತಿಹಾಸಿಕ 9 ದೇವಸ್ಥಾನಗಳ ಬಾಗಿಲು ಬಂದ್
ವೀಕ್ಷಣೆಗೆ ಸ್ಥಳದ ಆಯ್ಕೆ ಹೇಗಿರಬೇಕು?
ಗ್ರಹಣದ ಸಮಯ ತಡರಾತ್ರಿಯಾಗಿರುವುದರಿಂದ ತಮ್ಮ ಮನೆಗಳ ಹೊರಾಂಗಣ ಅಥವಾ ತಾರಸಿಗಳಲ್ಲಿ ವೀಕ್ಷಣೆ ಮಾಡಬಹುದು. ಮೋಡವಿದ್ದರೂ ಕೆಲಕಾಲ ಸ್ಪಷ್ಟವಾಗಿ ಕಾಣಿಸುವ ಸಾಧ್ಯತೆ ಇದೆ.
ಎಲ್ಲಿಲ್ಲಿ ವ್ಯವಸ್ಥೆ?
ಬೆಂಗಳೂರಿನ ನೆಹರೂ ತಾರಾಲಾಯ, ಲಾಲ್‌ಬಾಗ್ ಸೇರಿದಂತೆ ರಾಜ್ಯದ ಹಲವೆಡೆ ಅನೇಕ ಸಂಸ್ಥೆಗಳಿಂದ ಗ್ರಹಣ ವೀಕ್ಷಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.