ಬೆಂಗಳೂರು: ಚಂದ್ರಗ್ರಹಣ (Lunar Eclipse) ಪ್ರಕ್ರಿಯೆ ಶುರುವಾಗಿದೆ. ಬಾಹ್ಯಾಕಾಶದಲ್ಲಿ ಚಂದ್ರಚೋದ್ಯ ಅಂತೀರೋ…? ಚಂದ್ರನ ಚಮತ್ಕಾರ ಅಂತೀರೋ..? ಪೌರಾಣಿಕ, ವೈಜ್ಞಾನಿಕ, ಐತಿಹಾಸಿಕ, ಧಾರ್ಮಿಕವಾಗಿಯೂ ಚಂದ್ರ ನಮ್ಮೆಲ್ಲರ ಜೊತೆ ಬೆಸೆದು ಹೋಗಿದ್ದಾನೆ. ಆದ್ರೆ, ಈಗ ರಕ್ತವರ್ಣದಲ್ಲಿ (Blood Moon) ಚಂದ್ರಗ್ರಹಣ ಸಂಭವಿಸ್ತಿರೋದ್ರಿಂದ ಎಲ್ಲರಲ್ಲೂ ಆತಂಕ.
ಈಗಷ್ಟೇ ಚಂದ್ರಗ್ರಹಣದ ಪ್ರಕ್ರಿಯೆ ಆರಂಭವಾಗಿಬಿಟ್ಟಿದೆ. ರಾತ್ರಿ 9:57ರಿಂದ ಮಧ್ಯರಾತ್ರಿ 1:26ರ ವರೆಗೆ ಒಟ್ಟು ಮೂರೂವರೆ ಗಂಟೆಗಳ ಕಾಲ ನಿಧಾನವಾಗಿ ಗ್ರಹಣ ಸಂಭವಿಸಲಿದೆ. ಇದನ್ನು ರಕ್ತಚಂದ್ರಗ್ರಹಣ, ರಾಹುಗ್ರಸ್ಥ, ಖಗ್ರಾಸ ಚಂದ್ರಗ್ರಹಣ ಅಂತಲೂ ಕರೀತಾರೆ. ಉತ್ತರ & ದಕ್ಷಿಣ ಅಮೆರಿಕ ಹೊರತು ಪಡಿಸಿ ಜಗತ್ತಿನಾದ್ಯಂತ ಅದರಲ್ಲೂ ಭಾರತದಲ್ಲಿ ಸಂಪೂರ್ಣವಾಗಿ ಗ್ರಹಣ ಗೋಚರ ಆಗುತ್ತೆ. ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪೂರ್ಣ ಚಂದ್ರ ಗೋಚರ ಆಗಿದೆ.
ಸುದೀರ್ಘ ಅವಧಿಯ ಅಪರೂಪದ ಚಂದ್ರಗ್ರಹಣ ಇದಾಗಿದೆ. ರಾಜ್ಯದ ಬಹುತೇಕ ದೇಗುಲಗಳು ಬಂದ್ ಆಗಿದ್ರೆ. ಕೆಲ ಈಶ್ವರ ದೇಗುಲಗಳಲ್ಲಿ ಅಭಿಷೇಕಗಳು ನಡೀತಿವೆ. ಇದೊಂದು ಖಗೋಳ ಕೌತುಕವಾಗಿದ್ದು ಬರಿಗಣ್ಣಿನಲ್ಲೇ ವೀಕ್ಷಿಸಬಹುದಾಗಿದೆ. ಇನ್ನು, ವಿಜ್ಞಾನಿಗಳ ಪಾಲಿಗೆ ಇದು ಖಗೋಳ ವಿಸ್ಮಯವಾದರೆ. ಭಾದ್ರಪದ ಪೂರ್ಣಿಮೆಯ ದಿನವಾದ ಇಂದು ಜ್ಯೋತಿಷ್ಯದ ಪಾಲಿಗೆ ಗ್ರಹಣ ಶುಭ- ಅಶುಭಗಳ ಲೆಕ್ಕಾಚಾರವಾಗಿದೆ.
ಚಂದ್ರಗ್ರಹಣ ಯಾವಾಗ..?
– ರಾತ್ರಿ 9:57ರಿಂದ ಮಧ್ಯರಾತ್ರಿ 01:26ರ ವರೆಗೆ
– ಒಟ್ಟು ಅವಧಿ 3 ಗಂಟೆ 28 ನಿಮಿಷ 2 ಸೆಕೆಂಡು
ಯಾವ ಸಮಯದಲ್ಲಿ ಉತ್ತುಂಗದಲ್ಲಿರುತ್ತದೆ..?
– ರಾತ್ರಿ 11 ರಿಂದ 12:22 ರವರೆಗೆ ಉತ್ತುಂಗ
ಚಂದಿರನ್ಯಾಕೆ ರಕ್ತವರ್ಣದಲ್ಲಿ ಕಂಗೊಳಿಸಲಿದ್ದಾನೆ..?
– ಸೂರ್ಯ & ಚಂದ್ರರ ನಡುವೆ ಭೂಮಿ ನೇರವಾಗಿ ಒಂದೇ ಗೆರೆಯಂತೆ ಬಂದಾಗ ಚಂದ್ರಗ್ರಹಣ.
– ಭೂಮಿಯ ನೆರಳು ಕೆಲ ಕಾಲ ಚಂದಿರನ ಮೇಲೆ ಬೀಳುವುದರಿಂದ ಚಂದ್ರ ಮರೆಯಾಗುತ್ತದೆ.
– ಭೂಮಿಯ ನೆರಳಿನಲ್ಲಿ ಎರಡು ಭಾಗ ಇದೆ.
– ಅಂಬ್ರಾ – ಇದು ಗಾಢ ಕತ್ತಲೆಯ ಭಾಗ.
– ಪೆನಾಂಬ್ರಾ – ಹೊರಗಿನ ಮಬ್ಬಾದ ಭಾಗ.
– ಚಂದ್ರ ಸಂಪೂರ್ಣವಾಗಿ ಅಂಬ್ರಾ ಪ್ರವೇಶಿಸಿದಾದ ತಾಮ್ರವರ್ಣ ಅಥವಾ ಗಾಢ ಕೆಂಪುಬಣ್ಣದಲ್ಲಿ ಕಾಣಿಸುತ್ತಾನೆ.