581 ವರ್ಷಗಳ ಬಳಿಕ ಇಂದು ಸುದೀರ್ಘ ಚಂದ್ರಗ್ರಹಣ- ಮತ್ತಷ್ಟು ಪ್ರಕೃತಿ ಪ್ರಕೋಪದ ಭವಿಷ್ಯ

Public TV
3 Min Read
LUNAR ECLIPSE

ಬೆಂಗಳೂರು: ಅಪರೂಪದಲ್ಲೇ ಅಪರೂಪದ ಅಚ್ಚರಿಯ ಕುತೂಹಲದ ವಿದ್ಯಮಾನಕ್ಕೆ ಇಂದು ಭೂಮಿ ಸಾಕ್ಷಿಯಾಗುತ್ತಿದೆ. ಬರೋಬ್ಬರಿ 581 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅತಿಸುದೀರ್ಘ ಪಾಕ್ಷಿಕ ಚಂದ್ರಗ್ರಹಣ ಸಂಭವಿಸುತ್ತಿದೆ. ಅಂದಹಾಗೇ ಇದು ಪ್ರತಿವರ್ಷ ಬರುವಂತಹ ಮತ್ತೊಂದು ಚಂದ್ರಗ್ರಹಣ ಅಲ್ಲ. ಈ ಬಾರಿ ಘಟಿಸ್ತಾ ಇರೋದು ಅಪರೂಪದಲ್ಲೇ ಅಪರೂಪದ ಚಂದ್ರಗ್ರಹಣ.

LUNAR ECLIPSE 4

ಹೌದು. 2021ನೇ ಇಸವಿಯ ಕೊನೆಯ ಚಂದ್ರ ಗ್ರಹಣ ಇಂದು ಕಾಣಿಸಲಿದೆ. ಇದು ಕೇವಲ ಈ ಶತಮಾನದ ಸುದೀರ್ಘ ಚಂದ್ರಗ್ರಹಣವಲ್ಲ. ಕಳೆದ ಆರು ಶತಮಾನಗಳಲ್ಲೇ ನಡೆಯದಷ್ಟು ಸುದೀರ್ಘವಾಗಿ ಕಾಣಿಸಲಿರುವ ಚಂದ್ರಗ್ರಹಣ ಇದು. ಹೀಗಾಗಿನೇ ಜ್ಯೋತಿಷ್ಯ ವರ್ಗಮಾತ್ರವಲ್ಲ ಸಮಸ್ತ ವಿಜ್ಞಾನಿಗಳ ಬಳಗವೇ ತುದಿಗಾಲಲ್ಲಿ ನಿಂತು ಈ ಅಪೂರ್ವ ಕ್ರಣಕ್ಕಾಗಿ ಕಾಯುತ್ತಿದೆ.

LUNAR ECLIPSE 3

ಚಂದ್ರಗ್ರಹಣದ ಸಮಯ:
ಗ್ರಹಣ ದಿನಾಂಕ: 19/11/2021
ಗ್ರಹಣ ಆರಂಭ: ಮಧ್ಯಾಹ್ನ 12.48
ಗ್ರಹಣ ಮಧ್ಯ ಕಾಲ: 2.32
ಗ್ರಹಣ ಅಂತ್ಯಕಾಲ: 4:17
ಗ್ರಹಣದ ಒಟ್ಟು ಅವಧಿ: 3 ಗಂಟೆ 28 ನಿಮಿಷ 24 ಸೆಕೆಂಡ್ಸ್

LUNAR ECLIPSE 2

ಈ ಗ್ರಹಣ ಇತಿಹಾಸದಲ್ಲೇ ಅತಿದೀರ್ಘ ಗ್ರಹಣವಾಗಿ ದಾಖಲಾಗಲಿದೆ. ಯಾಕಂದ್ರೆ ಬರೋಬ್ಬರಿ 3 ಗಂಟೆ 24 ನಿಮಿಷ ಚಂದ್ರನಿಗೆ ಗ್ರಹಣ ಹಿಡಿಯಲಿದೆ. ಇಷ್ಟು ಸುದೀರ್ಘವಾಗಿ ಯಾವತ್ತೂ ಚಂದ್ರನ ಮೇಲೆ ಭೂಮಿಯ ನೆರಳು ಆವರಿಸಿಲ್ಲ. ಅದರಲ್ಲೂ ಮಧ್ಯಾಹ್ನ 2.32ರ ವೇಳೆಗೆ ಚಂದ್ರನ ಶೇ.97 ರಷ್ಟು ಭಾಗವನ್ನು ಭೂಮಿ ಆವರಿಸಿಕೊಳ್ಳಲಿದೆ. ಇದನ್ನೂ ಓದಿ: ಮಹಾಮಂಗಳಾರತಿ ವೇಳೆ ಅಲುಗಾಡುತ್ತೆ 16 ಅಡಿ ಎತ್ತರದ ಹುತ್ತ

LUNAR ECLIPSE 1

ಕೆಂಪು ಬಣ್ಣಕ್ಕೆ ತಿರುಗಲಿದ್ದಾನೆ ಚಂದಿರ..!
ಇದು ಸುದೀರ್ಘ ಚಂದ್ರಗ್ರಹಣ ಮಾತ್ರವಲ್ಲ. ಇದು ರಕ್ತಚಂದ್ರಗ್ರಹಣವೂ ಹೌದು. ಈ ಬಾರಿ ಸೂರ್ಯನ ಬೆಳಕಿನ ಕೆಂಪು ಕಿರಣಗಳು ಭೂಮಿಯ ವಾತಾವರಣ ಪ್ರವೇಶಿಸಿ ನಂತರ ಅಲ್ಪಪ್ರಮಾಣದಲ್ಲಿ ಭಾಗುತ್ತಾ ಚಂದ್ರನ ಮೇಲೆ ಬೀಳಲಿದೆ. ಈ ಸುದೀರ್ಘ ಚಂದ್ರ ಗ್ರಹಣದ ವೇಳೆ ಚಂದ್ರನು ಕೆಂಪುಬಣ್ಣದಲ್ಲಿ ಕಾಣಿಸಲಿದ್ದಾನೆ. ಚಂದ್ರ, ಸೂರ್ಯ ಮತ್ತು ಭೂಮಿ ಒಂದೇ ಸರಳ ರೇಖೆಯಲ್ಲಿ ಬಂದಾಗ ಭೂಮಿಯ ನೆರಳು ಚಂದ್ರನ ಮೇಲೆ ಅಪೂರ್ಣವಾಗಿ ಬಿದ್ದು ಪಾಕ್ಷಿಕ ಚಂದ್ರಗ್ರಹಣ ಸಂಭವಿಸುತ್ತದೆ. ಆಗ ಭೂಮಿಯ ನೆರಳು ಚಂದ್ರನ ಮೇಲೆ ಶೇ.97ರಷ್ಟು ಬೀಳಲಿದ್ದು, ಚಂದ್ರ ಕೆಂಪುಕೆಂಪಾಗಿ ಕಾಣುತ್ತಾನೆ.

LUNAR ECLIPSE 7

ಭಾರತದಲ್ಲಿ ಸ್ಪಷ್ಟವಾಗಿ ಗೋಚರವಾಗಲ್ಲ..!
ಸಾವಿರ ವರ್ಷಗಳಿಗೆ 2 ಬಾರಿ ನಡೆಯುವಂತಹ ಈ ಅಪರೂಪದ ವಿದ್ಯಮಾನ ಈ ಬಾರಿ ನಡೆಯುತ್ತಿದೆ. ಹೀಗಾಗಿನೇ ಈ ಸುದೀರ್ಘ ಚಂದ್ರಗ್ರಹಣದ ಮೇಲೆ ಸಾಕಷ್ಟು ಕುತೂಹಲ ಮೂಡಿದೆ. ಚಂದ್ರನ ಅಪರೂಪದ ದೃಶ್ಯಕಾವ್ಯವನ್ನು ನೋಡಲು ವಿಜ್ಞಾನಿಗಳು ಕಾಯುತ್ತಿದ್ದಾರೆ. ಈ ರಕ್ತಚಂದ್ರಗ್ರಹಣ ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಪಶ್ಚಿಮ ಆಫ್ರಿಕಾ, ಪಶ್ಚಿಮ ಯುರೋಪ್ ಹಾಗೂ ಏಷ್ಯಾದ ಕೆಲವು ದೇಶಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಗೋಚರವಾಗಲಿದೆ. ಮಧ್ಯಾಹ್ನ 12.48ರಿಂದ 4.17ರ ನಡುವೆ ಗ್ರಹಣ ನಡೆಯೋದ್ರಿಂದ ಭಾರತದಲ್ಲಿ ಇದು ಗೋಚರಿಸುವುದಿಲ್ಲ. ಆದ್ರೆ ಈಶಾನ್ಯ ಭಾರತದ ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಅಲ್ಪ ಪ್ರಮಾಣದಲ್ಲಿ ಗ್ರಹಣದ ನೆರಳು ಕಾಣಿಸಬಹುದು ಅಂತ ವಿಜ್ಞಾನಿಗಳು ಹೇಳಿದ್ದಾರೆ.

LUNAR ECLIPSE 5

ಪ್ರಕೃತಿ ಮತ್ತೆ ಅಲ್ಲೋಲ-ಕಲ್ಲೋಲ..!?
ಗ್ರಹಣ ಬಂದಾಗ ವಿಜ್ಞಾನಿಗಳು ಕುತೂಹಲದ ಕಣ್ಣಿನಿಂದ ನೋಡಿದ್ರೆ ಧಾರ್ಮಿಕರು ಅಪಾಯದ ಕಣ್ಣುಗಳಿಂದ ನೋಡುತ್ತಾರೆ. ಗ್ರಹಣದಿಂದ ಕೇಡುಕಾಲ ಖಂಡಿತ ಅನ್ನೋದು ಆಧ್ಯಾತ್ಮಿಕ ಚಿಂತಕರ ಅಭಿಪ್ರಾಯ. ಮಾತ್ರವಲ್ಲದೇ ಈ ಗ್ರಹಣದಿಂದಾಗಿ ಪ್ರಕೃತಿಯಲ್ಲಿ ಅಲ್ಲೋಲ-ಕಲ್ಲೋಲ ಸಂಭವಿಸುತ್ತೆ ಅಂತಾ ಮುನ್ಸೂಚನೆ ಕೊಟ್ಟಿದ್ದಾರೆ. ಶೀತಗಾಳಿ, ಮಳೆ ಎಲ್ಲಾ ಗ್ರಹಣದ ಗ್ರಹಚಾರ. ಭಾರತಕ್ಕೆ ಗ್ರಹಣ ಕಾಣದಿದ್ದರೂ, ಅದರ ದೋಷಗಳು ಕಟ್ಟಿಟ್ಟಬುತ್ತಿ ಅಂತಾ ಆನಂದ್ ಗುರೂಜಿ ಹೇಳಿದ್ದಾರೆ. ಇದನ್ನೂ ಓದಿ: ಭಾರೀ ಮಳೆ- ಬೆಂಗಳೂರು ಸೇರಿ 6 ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ, ಅಲರ್ಟ್‌ ಆಗಿರಲು 13 ಜಿಲ್ಲೆಗಳಿಗೆ ಸೂಚನೆ

LUNAR ECLIPSE 6

ಗ್ರಹಣ ಗೋಚರಿಸದಿದ್ದರೂ ಗ್ರಹಚಾರ ಖಂಡಿತ:
ಗ್ರಹಣ ಅಂದಾಕ್ಷಣ ರಾಶಿ ಫಲಾಫಲದ ಪ್ರಶ್ನೆ ಮೂಡುತ್ತೆ. ಗ್ರಹಣ ಭಾರತದಲ್ಲಿ ಗೋಚರಿಸದೇ ಇದ್ದರೂ ಕೂಡ ಅದರ ದೋಷ ಎಲ್ಲಾ ರಾಶಿಗಳ ಮೇಲಿರಲಿದೆ ಅಂತಾರೆ ಆಧ್ಯಾತ್ಮಿಕ ಚಿಂತಕರು. ಕಾರ್ತಿಕ ಮಾಸ ಶುಕ್ಲಪಕ್ಷದ ಹುಣ್ಣಿಮೆಯಂದು ಚಂದ್ರಗ್ರಹಣ ಗೋಚರಿಸ್ತಿದೆ. ಹಾಗಾಗಿ 27 ನಕ್ಷತ್ರ, 12 ರಾಶಿಗಳಲ್ಲಿ, ಒಂದಿಷ್ಟು ರಾಶಿಗಳಿಗೆ ಸಮಸ್ಯೆ ಕಟ್ಟಿಟ್ಟಬುತ್ತಿ ಎಂದು ಆನಂದ್ ಗುರೂಜಿ ಹೇಳಿದ್ದಾರೆ.

LUNAR 1 2 e1563246435658

ಒಟ್ಟಿನಲ್ಲಿ ಮೂರೂವರೆ ಗಂಟೆಯಷ್ಟು ಕಾಲ ದಟ್ಟ ಗ್ರಹಣ ಚಂದಿರನ ಮೇಲೆ ಆವರಿಸುತ್ತಿದೆ. 581 ವರ್ಷಗಳ ನಂತರ ಇಂತದ್ದೊಂದು ವಿದ್ಯಮಾನ ನಡೆಯುತ್ತಿರುವುದರಿಂದ ವಿಜ್ಞಾನಿ ಬಳಗದಲ್ಲೂ ಕುತೂಹಲವಿದೆ. ಒಂದಷ್ಟು ಅಧ್ಯಯನ ನಡೆಸಲು ಈ ಗ್ರಹಣ ಪ್ರಕ್ರಿಯೆ ಅವಕಾಶ ಮಾಡಿಕೊಡುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *