ಕಾರವಾರ: ದಕ್ಷಿಣ ಹಾಗೂ ಮಧ್ಯ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಹರಡಿದ್ದ ಜಾನುವಾರು ಚರ್ಮಗಂಟು ರೋಗ ಇದೀಗ ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲೂ ಆವರಿಸಿದ್ದು ಗೋವುಗಳನ್ನು ಬಲಿಪಡೆಯುತ್ತಿದೆ.
ಜಾನುವಾರುಗಳಲ್ಲಿ (Cattle) ಕಾಣಿಸಿಕೊಳ್ಳುತ್ತಿರುವ ಚರ್ಮಗಂಟು ರೋಗ ದಿನದಿಂದ ದಿನಕ್ಕೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಉಲ್ಬಣಗೊಳ್ಳುತ್ತಿದೆ. ರೈತರ ಒಡನಾಡಿ ಗೋವುಗಳಿಗೆ ಚರ್ಮಗಂಟು ರೋಗ (Lumpy Skin Disease) ಹರಡುತ್ತಿದೆ. ಆರಂಭದಲ್ಲಿ ದಕ್ಷಿಣ ಹಾಗೂ ಮಧ್ಯ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಹರಡಿದ್ದ ರೋಗ ಇದೀಗ ಉತ್ತರ ಕನ್ನಡ ಜಿಲ್ಲೆಗೂ ವ್ಯಾಪಿಸಿದೆ.
Advertisement
Advertisement
ಈಗಾಗಲೇ ಜಿಲ್ಲೆಯಾದ್ಯಂತ ಸುಮಾರು 110ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿವೆ. ಒಟ್ಟು 434 ಹಳ್ಳಿಗಳಲ್ಲಿ 2,500ಕ್ಕೂ ಹೆಚ್ಚು ಜಾನುವಾರುಗಳಲ್ಲಿ ರೋಗ ಕಾಣಿಸಿಕೊಂಡಿದೆ. ಸದ್ಯ 1,000 ಜಾನುವಾರುಗಳು ಗುಣಮುಖವಾಗಿದ್ದು, ಲಕ್ಷದಷ್ಟು ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ.
Advertisement
ಈ ರೋಗ ಜಿಲ್ಲೆಯ ಭಟ್ಕಳ, ಹೊನ್ನಾವರ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಹೊನ್ನಾವರದ ಸಾಲ್ಕೋಡು ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳ ಅವಧಿಯಲ್ಲಿಯೇ 3 ಆಕಳುಗಳು ಸಾವಿಗೀಡಾಗಿವೆ. ಅಲ್ಲದೆ ರೋಗವು ಒಂದು ಆಕಳಿಂದ ಇನ್ನೊಂದು ಆಕಳಿಗೆ ಹರಡುವ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಗೋವುಗಳನ್ನು ಸಾಕುವವರಲ್ಲಿ ಇದೀಗ ಆತಂಕ ಹೆಚ್ಚಾಗಿದೆ.
Advertisement
ಪಶು ಇಲಾಖೆಯಲ್ಲಿ ಸೂಕ್ತ ವೈದ್ಯರ ಕೊರತೆ, ಅಂಬುಲೆನ್ಸ್ ವ್ಯವಸ್ಥೆ ಇಲ್ಲದೇ ಇರುವುದರಿಂದ ಚಿಕಿತ್ಸೆಗೆ ತೊಂದರೆಯಾಗುತ್ತಿದೆ. ಔಷಧಿಗಳು ಕೂಡಾ ಇಲಾಖೆ ಮಟ್ಟದಲ್ಲಿ ಸಿಗದೇ ಇರುವುದರಿಂದ ಪಶುಪಾಲಕರು ಸಂಕಷ್ಟ ಅನುಭವಿಸುತ್ತಿರುವ ಜೊತೆ ಜಾನುವಾರುಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು 100ಕ್ಕೂ ಹೆಚ್ಚು ಗೋವುಗಳನ್ನು ಸಾಕಿರುವ ಹೊನ್ನಾವರ ತಾಲೂಕಿನ ಕವಲಕ್ಕಿಯ ವಿನಾಯಕ್ ಶೆಟ್ಟಿ ಸಮಸ್ಯೆಯನ್ನು ವಿವರಿಸಿದ್ದಾರೆ.
ಹಳ್ಳಿಯಲ್ಲಿರುವ ಬಹುತೇಕ ಜನರಿಗೆ ಗೋವುಗಳೇ ಆಧಾರ ಸ್ತಂಭ. ಇಂತಹ ಗೋವುಗಳಿಗೆ ಎದುರಾಗಿರುವ ಸಂಕಷ್ಟ ನಿವಾರಣೆಗೆ ಬಹುತೇಕರು ಪಶು ಆಸ್ಪತ್ರೆಗಳತ್ತ ತೆರಳುತ್ತಿದ್ದಾರೆ. ಆದರೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೇ ಜಿಲ್ಲೆಯ ಪಶು ಇಲಾಖೆಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಎದುರಾಗಿದೆ. ಇದನ್ನೂ ಓದಿ: ಸಿದ್ದು ಹೋದಲ್ಲೆಲ್ಲಾ ಅಭ್ಯರ್ಥಿಗಳ ಘೋಷಣೆ ಮಾಡುವುದು ಸರಿಯಲ್ಲ: ಸತೀಶ್ ಜಾರಕಿಹೊಳಿ
ಇದೀಗ ಜಿಲ್ಲೆಯಲ್ಲಿ ರೋಗ ಉಲ್ಬಣವಾಗುತ್ತಿದ್ದಂತೆ ಉತ್ತರ ಕನ್ನಡದಾದ್ಯಂತ ಡಿಸೆಂಬರ್ 18ರ ವರೆಗೆ ಜಾನುವಾರು ಸಾಗಾಟ, ಮಾರಾಟ ಹಾಗೂ ಜಾನುವಾರು ಸಂತೆಯನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ.
ಜಾನುವಾರುಗಳಿಗೆ ವ್ಯಾಕ್ಸಿನ್ ನೀಡುವ ವ್ಯವಸ್ಥೆ ಮಾಡಲಾಗಿದ್ದರೂ ವೈದ್ಯರ ಕೊರತೆಯಿಂದಾಗಿ ನಿಧಾನವಾಗುತ್ತಿದೆ. ಜಿಲ್ಲೆಗೆ 13 ಅಂಬುಲೆನ್ಸ್‌ಗಳನ್ನು ಕೊಡಲಾಗಿದ್ದು, ಇದನ್ನು ಈ ತಿಂಗಳೊಳಗೆ ಕಾರ್ಯರೂಪಕ್ಕೆ ತರಲು ಆದೇಶ ನೀಡಲಾಗಿದೆ. ಸದ್ಯ 76 ಜಾನುವಾರುಗಳಿಗೆ ಪರಿಹಾರದ ಹಣ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಒಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಜಾನುವಾರುಗಳಿಗೆ ಹಬ್ಬಿರುವ ಚರ್ಮಗಂಟು ರೋಗ ಸಾಕಷ್ಟು ರಾಸುಗಳನ್ನು ಬಲಿ ತೆಗೆದುಕೊಂಡಿದೆ. ಸರ್ಕಾರ ಈ ಬಗ್ಗೆ ಹೆಚ್ಚಿನ ಗಮನ ಹರಿಸಿ ಪ್ರತಿ ಜಾನುವಾರುಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಒದಗಿಸುವ ವ್ಯವಸ್ಥೆ ಮಾಡಬೇಕಿದೆ. ಇದನ್ನೂ ಓದಿ: ಬೆಂಗಳೂರು ವಿಶ್ವ ದರ್ಜೆಯ ಶೈಕ್ಷಣಿಕ, ಸಂಶೋಧನಾ ಸಂಸ್ಥೆಗಳ ಕೇಂದ್ರ: ಗೆಹ್ಲೋಟ್