ಹಣದಾಸೆಗೆ ಸುಳ್ಳು ಗ್ಯಾಂಗ್ ರೇಪ್ ಕಥೆ ಕಟ್ಟಿದ ಇಬ್ಬರು ಮಹಿಳೆಯರು ಅರೆಸ್ಟ್

Public TV
1 Min Read
FAKE RAPE CASE

– ಸರ್ಕಾರದಿಂದ ಧನಸಹಾಯ ಪಡೆಯಲು ಖತರ್ನಾಕ್ ಪ್ಲಾನ್

ಲಕ್ನೋ: ಒಂದೆಡೆ ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶಾದ್ಯಂತ ಅತ್ಯಾಚಾರದ ಪ್ರಕರಣಗಳು ಹೆಚ್ಚು ನಡೆಯುತ್ತಿದೆ. ಇನ್ನೊಂದೆಡೆ ಗಾಜಿಯಾಬಾದ್‍ನಲ್ಲಿ ನಮ್ಮ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಹಣ ದೋಚಲು ಮಹಿಳೆಯರಿಬ್ಬರು ಸುಳ್ಳು ಆರೋಪ ಮಾಡಿ ಕಂಬಿ ಎಣೆಸುತ್ತಿದ್ದಾರೆ.

ಗಾಜಿಯಾಬಾದ್‍ನ ಮುಸ್ಸೂರಿ ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ಈ ಘಟನೆ ನಡೆದಿದೆ. ರೇಪ್ ಸಂತ್ರಸ್ತೆಯರು ಎಂದು ಸುಳ್ಳು ಹೇಳಿ ಇಬ್ಬರು ಮಹಿಳೆಯರು ಸರ್ಕಾರದಿಂದ ಹಣ ಪಡೆಯಲು ಮಾಡಿದ್ದ ಪ್ಲಾನ್ ಈಗ ಮಕಾಡೆ ಮಲಗಿದೆ. ತಡರಾತ್ರಿ 11 ಗಂಟೆ ವೇಳೆಗೆ ಮಹಿಳೆ ಪೊಲೀಸ್ ಠಾಣೆಗೆ ಕರೆ ಮಾಡಿ, ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಹೇಳಿದ್ದಾಳೆ.

ಈ ಬಗ್ಗೆ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿದಾಗ ಮಹಿಳೆ ರಸ್ತೆ ಮೇಲೆ ಪ್ರಜ್ಞೆ ತಪ್ಪಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ತಕ್ಷಣ ಆಕೆಯನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದರು. ವಿಚಾರಣೆ ವೇಳೆ, ರಾತ್ರಿ ಲಿಫ್ಟ್ ನೀಡುವ ನೆಪದಲ್ಲಿ ಗುಂಪೊಂದು ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದೆ ಎಂದು ಮಹಿಳೆ ಹೇಳಿದ್ದಳು. ಅಲ್ಲದೆ ವೈದ್ಯಕೀಯ ಪರೀಕ್ಷೆಯನ್ನು ನಿರಾಕರಿಸಿದ್ದಳು. ಆಗ ಪೊಲೀಸರಿಗೆ ಅನುಮಾನ ಮೂಡಿ ಈ ಬಗ್ಗೆ ತನಿಖೆ ಕೈಗೊಂಡಾಗ ಮಹಿಳೆಯ ನಿಜಬಣ್ಣ ಬಯಲಾಗಿದೆ.

FAKE RAPE CASE 1

ಮಹಿಳೆ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಸುಳ್ಳು ದೂರು ಕೊಟ್ಟು ನಾಟಕವಾಡಿರುವುದು ಬಯಲಾಗಿದೆ. ಸರ್ಕಾರದಿಂದ ಅತ್ಯಾಚಾರ ಸಂತ್ರಸ್ತೆಗೆ ಸಿಗುವ ಧನ ಸಹಾಯವನ್ನು ಪಡೆಯೋದಕ್ಕೆ ಮಹಿಳೆ ಈ ಖತರ್ನಾಕ್ ಪ್ಲಾನ್ ಮಾಡಿರುವುದು ಬಯಲಾಗಿದೆ.

ಮಹಿಳೆಯ ಅಸಲಿಯತ್ತು ತಿಳಿಯುತ್ತಿದ್ದಂತೆ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಹಾಗೆಯೇ ಆರೋಪಿ ಜೊತೆಗೆ ಕೈಜೋಡಿಸಿದ್ದ ಇನ್ನೋರ್ವ ಮಹಿಳೆಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ದೇಶಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯಗಳನ್ನು ತಡೆಯಲು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಮುಂದಾಗಿದೆ. ಆದರೆ ಹೀಗೆ ಮಹಿಳೆಯರೇ ಸುಳ್ಳು ಆರೋಪ ಮಾಡಿ ಹಣ ದೋಚಲು ಮುಂದಾಗಿದ್ದು ವಿಪರ್ಯಾಸವಾಗಿದೆ.

Share This Article