ಲಕ್ನೋ: 18ನೇ ಆವೃತ್ತಿಯ ಐಪಿಎಲ್‌ನ ಆರಂಭದಿಂದಲೂ ಕಳಪೆ ಪ್ರದರ್ಶನ ನೀಡಿ ಟೀಕೆಗೆ ಗುರಿಯಾಗಿದ್ದ ರಿಷಭ್ ಪಂತ್ (Rishabh Pant) ಆಟಕ್ಕುಂಟು ಲೆಕ್ಕಕ್ಕಿಲ್ಲದ ಕೊನೆಯ ರೋಷಾವೇಶದ ಬ್ಯಾಟಿಂಗ್ ಮಾಡಿದರು. ಕ್ರೀಸ್‌ಗಿಳಿಯುತ್ತಿದ್ದಂತೆ ಸ್ಫೋಟಕ ಪ್ರದರ್ಶನಕ್ಕೆ ಮುಂದಾದ ಪಂತ್ ಆರ್‌ಸಿಬಿ (RCB) ವಿರುದ್ಧ ಭರ್ಜರಿ ಶತಕ ಸಿಡಿಸಿ ಮಿಂಚಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ನಿಗದಿತ ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿದೆ. ಈ ಮೂಲಕ ಆರ್‌ಸಿಬಿ ಗೆಲುವಿಗೆ 228 ರನ್‌ಗಳ ಕಠಿಣ ಗುರಿ ನೀಡಿದೆ.
ಈಗಾಗಲೇ ಪ್ಲೇ ಆಫ್‌ನಿಂದ ಹೊರಬಿದ್ದಿರುವ ಲಕ್ನೋ ಕೊನೆಯ ಪಂದ್ಯದಲ್ಲಿ ಆರಂಭದಿಂದಲೇ ಸ್ಫೋಟಕ ಪ್ರದರ್ಶನಕ್ಕೆ ಮುಂದಾಯಿತು. 2.4 ಓವರ್‌ಗಳಲ್ಲಿ 25 ರನ್‌ಗಳಿದ್ದಾಗಲೇ ಮೊದಲ ವಿಕೆಟ್ ಕಳೆದುಕೊಂಡು ನಿರಾಸೆ ಅನುಭವಿಸಿತು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪಂತ್ ಮತ್ತೊಬ್ಬ ಆರಂಭಿಕ ಮಿಚೆಲ್ ಮಾರ್ಷ್ ಜೊತೆಗೂಡಿ ಅಬ್ಬರಿಸಲು ಪ್ರಾರಂಭಿಸಿದರು. 2ನೇ ವಿಕೆಟಿಗೆ ಈ ಜೋಡಿ 78 ಎಸೆತಗಳಲ್ಲಿ ಬರೋಬ್ಬರಿ 152 ರನ್ ಜೊತೆಯಾಟ ನೀಡಿತ್ತು. ಇದರಿಂದ ಲಕ್ನೋ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.
ಲಕ್ನೋ ಪರ 193.44 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಪಂತ್ ಅಜೇಯ 118 ರನ್ (61 ಎಸೆತ, 8 ಸಿಕ್ಸರ್, 11 ಬೌಂಡರಿ), ಮಿಚೆಲ್ ಮಾರ್ಷ್ 67 ರನ್ ?(37 ಎಸೆತ, 5 ಸಿಕ್ಸರ್, 4 ಬೌಂಡರಿ), ಮ್ಯಾಥ್ಯೂ ಬ್ರೀಟ್ಜ್ಕೆ 14 ರನ್, ನಿಕೋಲಸ್ ಪೂರನ್ 13 ರನ್, ಅಬ್ದುಲ್ ಸಮದ್ 1 ರನ್ ಗಳಿಸಿದ್ರೆ, ಲೆಗ್‌ಬೈಸ್, ನೋಬಾಲ್, ವೈಡ್‌ನಿಂದ 14 ಹೆಚ್ಚುವರಿ ರನ್ ತಂಡಕ್ಕೆ ಸೇರ್ಪಡೆಯಾಯಿತು.
ಆರ್‌ಸಿಬಿ ಪರ ನುವಾನ್ ತುಷಾರ, ಭುವನೇಶ್ಚರ್ ಕುಮಾರ್, ರೊಮಾರಿಯೊ ಶೆಫರ್ಡ್ ತಲಾ ಒಂದೊಂದು ವಿಕೆಟ್ ಪಡೆದರು.