ರಾಹುಲ್‌ ಅಬ್ಬರದ ಆಟ – ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್‌ಗಳ ಭರ್ಜರಿ ಜಯ

Public TV
2 Min Read
Lucknow Super Giants beats Chennai Super Kings eight wickets

ಲಕ್ನೋ: ಇಲ್ಲಿನ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್‌ನ 34ನೇ ಪಂದ್ಯದಲ್ಲಿ ಐದು ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಲಕ್ನೋ ಸೂಪರ್‌ಜೈಂಟ್ಸ್ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಚೆನ್ನೈ ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ, ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ಅಜೇಯ ಅರ್ಧಶತಕ ಮತ್ತು ಮಹೇಂದ್ರ ಸಿಂಗ್ ಸ್ಫೋಟಕ ಆಟದಿಂದ ಎದುರಾಳಿ ತಂಡ ಲಕ್ನೋ ಸೂಪರ್‌ಜೈಂಟ್ಸ್‌ಗೆ 177 ರನ್‌ಗಳ ಗುರಿ ನೀಡಿತು.

ಈ ಗುರಿಯನ್ನು ಬೆನ್ನಟ್ಟಿದ ಲಕ್ನೋ ತಂಡ, 19 ಓವರ್‌ ಗಳಲ್ಲಿ 180 ರನ್‌ ಗಳಿಸಿ ಗೆಲವು ಸಾಧಿಸಿತು. ತಂಡದ ನಾಯಕ ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ತಂಡಕ್ಕೆ ಉತ್ತಮ ಆರಂಭ ನೀಡಿದರು. ಪವರ್‌ಪ್ಲೇ ಅಂತ್ಯಕ್ಕೆ ಲಕ್ನೋ ವಿಕೆಟ್ ನಷ್ಟವಿಲ್ಲದೆ 54 ರನ್ ದಾಖಲಿಸಿತು.

CSK

ಬಳಿಕ ಕ್ವಿಂಟನ್ ಡಿ ಕಾಕ್ 43 ಎಸೆತಗಳಲ್ಲಿ 54 ರನ್‌ ಗಳಿಸಿದರು. ಕೆ.ಎಲ್‌ ರಾಹುಲ್‌ 53 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 9 ಬೌಂಡರಿ ನೆರವಿನಿಂದ 82 ರನ್‌ ಗಳಿಸಿ ಔಟಾದರು. ನಂತರ ಅಖಾಡಕ್ಕಿಳಿದ ನಿಕೋಲಸ್ ಪೂರನ್ 12 ಎಸೆತಗಳಲ್ಲಿ 23, ಮಾರ್ಕಸ್ ಸ್ಟೊಯಿನಿಸ್ 8 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ತಲುಪಿಸಿದರು.

IPL 4

ಚೆನ್ನೈ ಸೂಪರ್ ಕಿಂಗ್ಸ್ ಪರ ಬ್ಯಾಟ್‌ ಬೀಸಿದ ಅಜಿಂಕ್ಯ ರಹಾನೆ ಮತ್ತು ರಚಿನ್ ರವೀಂದ್ರ ದೊಡ್ಡ ಆರಂಭ ನೀಡಲಿಲ್ಲ. ತಂಡದ ಮೊತ್ತ 4 ರನ್‌ಗಳಾಗಿದ್ದಾಗ ರಚಿನ್ ರವೀಂದ್ರ ಸೊನ್ನೆಗೆ ಔಟಾದರು. ನಂತರ ಬಂದ ನಾಯಕ ಋತುರಾಜ್ ಗಾಯಕ್ವಾಡ್ 13 ಎಸೆತಗಳಲ್ಲಿ 17 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಶಿವಂ ದುಬೆ 3 ರನ್, ಸಮೀರ್ ರಿಜ್ವಿ 1 ರನ್ ಗಳಿಸಿ ಬೇಗನೆ ಪೆವಿಲಿಯನ್‌ಗೆ ಮರಳಿದರು.

ಬಳಿಕ ಕ್ರೀಸ್‌ಗೆ ಬಂದ ರವೀಂದ್ರ ಜಡೇಜಾ 40 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ ಅಜೇಯ 57 ರನ್ ಬಾರಿಸಿದರು. ಮೊಯಿನ್ ಅಲಿ 20 ಎಸೆತಗಳಲ್ಲಿ 3 ಸಿಕ್ಸರ್ ಮೂಲಕ 30 ರನ್ ಗಳಿಸಿದರೆ, ಮಾಜಿ ನಾಯಕ ಎಂಎಸ್ ಧೋನಿ 9 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 28 ರನ್ ಬಾರಿಸಿ ಅಜೇಯರಾಗಿ ಉಳಿದರು.

ಇನ್ನು ಬೌಲಿಂಗ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಕೃನಾಲ್ ಪಾಂಡ್ಯ 3 ಓವರ್‌ಗಳಲ್ಲಿ 16 ರನ್ ನೀಡಿ 2 ವಿಕೆಟ್ ಪಡೆದರೆ, ಮೊಹ್ಸಿನ್ ಖಾನ್, ಯಶ್ ಠಾಕೂರ್, ರವಿ ಬಿಷ್ಣೋಯಿ ಮತ್ತು ಮಾರ್ಕಸ್ ಸ್ಟೋಯಿನಿಸ್ ತಲಾ ಒಂದೊಂದು ವಿಕೆಟ್ ಪಡೆದರು.

Share This Article