ಬ್ರೆಸಿಲಿಯಾ: ನಾಯಿಗಳ ನಿಷ್ಠೆಯ ಬಗ್ಗೆ ಎಷ್ಟು ಹೇಳಿದರೂ ಮುಗಿಯಲ್ಲ. ಮಾಲೀಕನ ಮೇಲೆ ನಾಯಿಗಳು ಎಷ್ಟು ಪ್ರೀತಿ ಇಟ್ಟಿರುತ್ತವೆ ಎಂಬುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆ. 4 ತಿಂಗಳ ಹಿಂದೆ ತನ್ನ ಮಾಲೀಕ ಸಾವನ್ನಪ್ಪಿದ ಆಸ್ಪತ್ರೆಯಿಂದ ಹೋಗಲು ನಿರಾಕರಿಸಿ ನಾಯಿಯೊಂದು ಅಲ್ಲೇ ಕಾಲ ಕಳೆಯುತ್ತಿರುವ ಘಟನೆ ಬ್ರೆಜಿಲ್‍ನಲ್ಲಿ ನಡೆದಿದೆ.
ಬ್ರೆಜಿಲ್‍ನ ಬೀದಿಯಲ್ಲಿ ನಾಯಿಯ ಮಾಲೀಕರಾದ ನಿರಾಶ್ರಿತ ವ್ಯಕ್ತಿಯೊಬ್ಬರ ಮೇಲೆ ಕೊಲೆ ಯತ್ನ ನಡೆದಿತ್ತು. ಅವರನ್ನ ಆಸ್ಪತ್ರೆಗೆ ರವಾನಿಸುವಾಗ ನಾಯಿ ಕೂಡ ಆಂಬುಲೆನ್ಸ್ ಹಿಂದೆ ಓಡಿಬಂದಿತ್ತು. ಆದ್ರೆ ವ್ಯಕ್ತಿ ಸಾವನ್ನಪ್ಪಿದರೂ ಕೂಡ ನಾಯಿ ಮಾತ್ರ ಆಸ್ಪತ್ರೆ ಬಿಟ್ಟು ಹೋಗ್ತಿಲ್ಲ.
Advertisement
ಸೇವಾ ಸಂಸ್ಥೆಯೊಂದು ನಾಯಿಗೆ ಬೇರೆಡೆ ಆಶ್ರಯ ಕಲ್ಪಿಸಲು ಸಾಕಷ್ಟು ಬಾರಿ ಪ್ರಯತ್ನಿಸಿ ವಿಫಲವಾಗಿದೆ. ಹೊಸ ಮಾಲೀಕರ ಮನೆಯಿಂದಲೂ ನಾಯಿ ತಪ್ಪಿಸಿಕೊಂಡು ಬಂದು ತನ್ನ ಯಜಮಾನನಿಗಾಗಿ ಆಸ್ಪತ್ರೆ ಮುಂದೆ ಕಾಯುತ್ತಿದೆ.
Advertisement
Advertisement
ಇಲ್ಲಿನ ನೋವೋ ಹಾರಿಜಾಂಟೆಯ ಸಾಂಟಾ ಕಾಸಾ ಆಸ್ಪತ್ರೆಯ ಹೊರಗಡೆ ಈ ನಾಯಿ 4 ತಿಂಗಳಿನಿಂದ ಕಾಯುತ್ತಿದೆ. ಸಾಂಟಾ ಕಾಸಾದ ಹಣಕಾಸು ನಿರ್ದೇಶಕರಾದ ಒಸ್ವಾಲ್ಡೋ ಪಲಾಟೋ ಸೊಬ್ರಿನ್ಹೋ ಅವರ ಪ್ರಕಾರ, ನಾಯಿಯ ಮಾಲೀಕರಾದ 59 ವರ್ಷದ ವ್ಯಕ್ತಿಗೆ ಚಾಕು ಇರಿದ ಬಳಿಕ ಅವರ ಜೊತೆಯಲ್ಲೇ ನಾಯಿ ಆಸ್ಪತ್ರೆಗೆ ಬಂದಿದೆ.
Advertisement
ಈಗ ಅದು ಪ್ರತಿದಿನ ಆಸ್ಪತ್ರೆಯ ಹೊರಗೆ ಕುಳಿತುಕೊಳ್ಳುತ್ತದೆ. ಆಗಾಗ ಊಟ ಮತ್ತು ನೀರಿಗಾಗಿ ಮಾತ್ರ ಅತ್ತಿತ್ತ ಓಡಾಡುತ್ತದೆ. ಆದ್ರೆ ಯಾವಗ್ಲೂ ಕೊನೆಗೆ ಆಸ್ಪತ್ರೆಯ ಬಾಗಿಲ ಮುಂದೆ ಹಾಕಲಾಗಿರುವ ಹೊದಿಕೆ ಮೇಲೆ ಬಂದು ಕೂರುತ್ತದೆ ಎಂದು ಅವರು ಹೇಳಿದ್ದಾರೆ.
ನಾಯಿಯನ್ನ ನೋಡಿ ಆಸ್ಪತ್ರೆ ಸಿಬ್ಬಂದಿ ಕೂಡ ಮರುಕಪಟ್ಟಿದ್ದಾರೆ. ಅದಕ್ಕಾಗಿ ಊಟ ಕೊಟ್ಟು, ಚಳಿಗೆ ಹೊದಿಕೆಯನ್ನೂ ತಂದು ಹಾಕಿದ್ದಾರೆ. ಈ ನಾಯಿ ತುಂಬಾ ಸಾಧು ಹಾಗೂ ಶಾಂತ ಸ್ವಭಾವದ್ದು ಎಂದು ಒಸ್ವಾಲ್ಡೋ ಹೇಳಿದ್ದಾರೆ.
ಬೇರೆ ಕಡೆ ಆಶ್ರಯ ಕಲ್ಪಿಸಿದ ನಂತರವೂ ನಾಯಿ ಆಸ್ಪತ್ರೆ ಬಾಗಿಲ ಬಳಿ ಬಂದು ಕಾಯುತ್ತಿದ್ದುದನ್ನು ನೋಡಿ ಸಿಬ್ಬಂದಿಗಳು ಆಶ್ಚರ್ಯಪಟ್ಟಿದ್ದಾರೆ. ಆಸ್ಪತ್ರೆಗೆ ವಾಪಸ್ ಬರಲು ನಾಯಿ 3 ಕಿ.ಮೀ ಓಡಿದೆ. ಕ್ರಿಸ್ಟೀನ್ ಸಾರ್ಡೆಲ್ಲಾ ಎಂಬವರು ನಾಯಿಯ ಈ ನಿಷ್ಠೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಅದರ ಸಮರ್ಪಣಾ ಭಾವ ನೋಡಿ ನನ್ನ ಮನಸ್ಸು ಕರಗಿತು ಎಂದು ಹೇಳಿದ್ದಾರೆ.
ನಾಯಿ ಆಸ್ಪತ್ರೆಯ ಒಳಗೆ ಇಣುಕಿ ನೋಡುವುದನ್ನ ಕಂಡರೆ ಮಾಲೀಕ ಅದಕ್ಕಾಗಿ ಕಾಯುತ್ತಿದ್ದಾರೆ ಎಂಬಂತೆ ಅನ್ನಿಸುತ್ತದೆ ಎಂದು ಅವರು ಹೇಳಿದ್ದಾರೆ.