ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಣಭೀಕರ ಚಳಿಗೆ ಜನ ನಡುಗುತ್ತಿದ್ದಾರೆ. ಮಂಜು ಕವಿದ ವಾತಾವರಣ, ಶೀತಗಾಳಿಯ (Cold wind) ನಡುವೆಯೂ ಜನ ಆರೋಗ್ಯ ಕಾಪಾಡಿಕೊಳ್ಳಲು ವಾಕಿಂಗ್, ಜಾಗಿಂಗ್ ಬರ್ತಿದ್ದಾರೆ.
16 -14 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು
ಹೌದು. ಬೆಂಗಳೂರಿನಲ್ಲಿ (Bengaluru) ಮೈ ಕೊರೆಯುವ ಚಳಿ ಮುಂದುವರಿದಿದ್ದು, ಜನಜೀವನದ ಮೇಲೆ ಪರಿಣಾಮ ಬೀರಿದೆ. ಕನಿಷ್ಠ ತಾಪಮಾನವು 16 ರಿಂದ 14 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ. ಚಳಿ ಹಾಗೂ ಶೀತಗಾಳಿಯಿಂದಾಗಿ ಬೆಳಗ್ಗೆ ವಾಕಿಂಗ್‌ಗೆ ಹೋಗಲು ಸಹ ಜನರು ಹಿಂದೇಟು ಹಾಕುತ್ತಿದ್ದಾರೆ. ಆದಾಗ್ಯೂ ಸ್ಯಾಂಕಿ ಕೆರೆಯಲ್ಲಿ ಚಳಿಗೆ ಸೆಡ್ಡು ಹೊಡೆದು ಜನ ವಾಕಿಂಗ್‌ಗೆ ಇಳಿದಿದ್ರು.

ಗಂಟೆಗೆ 16 ಕಿ.ಮೀ. ವೇಗದಲ್ಲಿ ಗಾಳಿ
ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ ಇದ್ದು, ಶೀತ ಗಾಳಿ ಬೀಸುತ್ತಿದೆ. ಘಂಟೆಗೆ 16 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಜನ ಬೆಚ್ಚನೆಯ ಸ್ವೆಟ್ಟರ್, ಕಿವಿಗೆ ಕ್ಯಾಪ್ ಧರಿಸಿ ಆರೋಗ್ಯ ಕಾಪಾಡಿಕೊಳ್ಳಲು ವಾಕಿಂಗ್ ಮಾಡ್ತಿದ್ದಾರೆ. ಇನ್ನೂ ವೃದ್ಧರೊಬ್ಬರನ್ನ ವ್ಹೀಲ್ ಚೇರ್ ಮೂಲಕವೇ ಸ್ಯಾಂಕಿಗೆ ಕರೆದುಕೊಂಡು ಬಂದಿದ್ರು.
ಡಿಸೆಂಬರ್ ನಲ್ಲಿ 12 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತೆ ಅಂತ ಭಾರತೀಯ ಹವಮಾನ ಇಲಾಖೆಯ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. 2016 ರಲ್ಲಿ ಕನಿಷ್ಠ ತಾಪಮಾನ ದಾಖಲಾಗಿತ್ತು. ಈ ದಾಖಲೆಯ ಚಳಿ ಮತ್ತೆ ಡಿಸೆಂಬರ್‌ನಲ್ಲಿ ದಾಖಲಾಗುವ ಸಾಧ್ಯತೆಯಿದೆ. ಅದೇನೇ ಇರಲಿ ಬೆಂಗಳೂರಿನಲ್ಲಿ ಸೂರ್ಯ ನೆತ್ತಿಗೇರಿದ್ರೂ ಚಳಿಯ ಅಬ್ಬರ ಕಡಿಮೆಯಾಗ್ತಿಲ್ಲ. ಈ ವೇಳೆ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸೋದು ಒಳ್ಳೆಯದು.

