ನವದೆಹಲಿ: ರೋಹಿಣಿಯ ಪ್ರಶಾಂತ್ ವಿಹಾರ್ ಪ್ರದೇಶದ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF) ಶಾಲೆಯ ಬಳಿ ನಡೆದ ಸ್ಫೋಟದಲ್ಲಿ ಕಡಿಮೆ ದರ್ಜೆಯ ಸ್ಫೋಟಕಗಳನ್ನು ಬಳಸಲಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಸ್ಫೋಟ ನಡೆದ ಸ್ಥಳದಲ್ಲಿ ದೆಹಲಿ ಪೊಲೀಸರು, ಫೋರೆನ್ಸಿಕ್ ತಂಡ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸಂಪೂರ್ಣ ಪರಿಶೀಲನೆ ನಡೆಸಿದೆ. ಇಲ್ಲಿ ಯಾವುದೇ ಟೈಮರ್ ಪತ್ತೆಯಾಗಿಲ್ಲ. ಸುಧಾರಿತ ಸ್ಫೋಟಕ ಸಾಧನದಲ್ಲಿ (IED) ಟೈಮರ್ ಬಳಕೆಯಾಗುತ್ತದೆ. ಪ್ರಾಥಮಿಕ ವಿಧಿವಿಜ್ಞಾನ ಪರೀಕ್ಷೆಯಲ್ಲಿ ಕ್ಲೋರೇಟ್ ಮತ್ತು ಹೈಡ್ರೋಜನ್ ಪೆರಾಕ್ಸೈಡ್ ಮಿಶ್ರಣವನ್ನು ಬಳಸಿ ಸ್ಫೋಟ ನಡೆಸಲಾಗಿದೆ ಎಂದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸ್ಫೋಟದಲ್ಲಿ ಬಳಕೆಯಾದ ಕಚ್ಚಾ ಬಾಂಬ್ ಬೆಂಕಿಯನ್ನು ಉಂಟುಮಾಡುವ ಸಾಧನದಂತೆ ತೋರುತ್ತಿಲ್ಲ. ಅದನ್ನು ತಿನಿಸುಗಳ ಸಮೀಪದಲ್ಲಿ ಇರಿಸಲಾಗಿತ್ತು. ಇದರ ಸ್ಫೋಟದಿಂದ ಅಂಗಡಿಗಳ ಗಾಜು ಹಾಗೂ ವಾಹನಗಳ ಗಾಜು ಒಡೆದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫೊರೆನ್ಸಿಕ್ ಪುರಾವೆಗಳನ್ನು ಹೆಚ್ಚಿನ ಪರೀಕ್ಷೆಗಾಗಿ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಕಳುಹಿಸಲಾಗಿದೆ. ಸ್ಫೋಟಕಗಳ ಕುರಿತು ಅಂತಿಮ ವರದಿ ಎರಡು ವಾರಗಳಲ್ಲಿ ಸಿಗುವ ಸಾಧ್ಯತೆ ಇದೆ. ದೆಹಲಿ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದು ಭಯೋತ್ಪಾದಕ ದಾಳಿಯಂತೆ ಕಾಣುತ್ತಿಲ್ಲ. ಇನ್ನೂ ಯುಎಪಿಎಯನ್ನು ಅಡಿಯಲ್ಲಿ ಈ ಪ್ರಕರಣ ಸೇರಿಸಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಘಟನೆ ನಡೆದ ಸ್ಥಳದ ಪರಿಶೀಲನೆಗೆ ದೆಹಲಿ ಪೊಲೀಸರಿಗೆ ಸಹಾಯ ಮಾಡಿದೆ. ವಿಕಿರಣ ತಪಾಸಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡವನ್ನು ಸಹ ನಿಯೋಜಿಸಲಾಗಿದೆ. ಇಲ್ಲಿಯವರೆಗೆ ಫೋರೆನ್ಸಿಕ್ ಸಾಕ್ಷ್ಯವು ದೇಶದಲ್ಲಿ ಇತ್ತೀಚಿನ ಸ್ಫೋಟಗಳೊಂದಿಗೆ ಯಾವುದೇ ಸಾಮಾನ್ಯತೆ ಹೊಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.