ಶಿವಮೊಗ್ಗ: ಕಿಡಿಗೇಡಿಗಳ ಬೆದರಿಕೆಗೆ ಹೆದರಿ ವಿಷ ಸೇವಿಸಿದ್ದ ಪ್ರೇಮಿಗಳ ಪೈಕಿ ಯುವಕ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದು ಯುವತಿ ಸ್ಥಿತಿ ಗಂಭೀರವಾಗಿದೆ.
ಹೊಸೂರು ಮಟ್ಟಿಯ ನಿವಾಸಿ ಸಂಜಯ್ ಕಳೆದ ಒಂದು ವರ್ಷದಿಂದ ರಾಗಿಹೊಸಹಳ್ಳಿಯ ಯುವತಿ ಪ್ರೀತಿಸುತ್ತಿದ್ದರು. ಪ್ರೇಮಿಗಳಿಬ್ಬರು ಏಕಾಂತದಲ್ಲಿದ್ದಾಗ ಆಯನೂರು ಗ್ರಾಮದ ಕೆಲ ಯುವಕರು ವಿಡಿಯೋ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸಂಜಯ್‍ಗೆ ಪದೇ ಪದೇ ಕರೆ ಮಾಡಿ, ಐದು ಲಕ್ಷ ಹಣ ಕೊಡುವಂತೆ ಬೇಡಿಕೆ ಇಟ್ಟು, ಹಣ ನೀಡಲು ನಿರಾಕರಿಸಿದರೆ ವಿಡಿಯೋವನ್ನು ವಾಟ್ಸಪ್, ಫೇಸ್ ಬುಕ್‍ಗೆ ಹಾಕುತ್ತೇವೆ ಎಂದು ಬೆದರಿಸಿದ್ದಾರೆ.
ಬೆದರಿಕೆಯಿಂದ ಬೇಸತ್ತಿದ್ದ ಪ್ರೇಮಿಗಳಿಬ್ಬರು ಸೋಮವಾರದಂದು ಕುಂಸಿ ಸಮೀಪದ ಮಂಡಘಟ್ಟದ ಹೊಲದಲ್ಲಿ ಒಟ್ಟಿಗೆ ವಿಷ ಸೇವಿಸಿದ್ದರು. ಇದನ್ನು ನೋಡಿದ ಸ್ಥಳೀಯರು ಇಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಯುವಕ ಮೃತಪಟ್ಟಿದ್ದು, ಯುವತಿ ಸ್ಥಿತಿ ಚಿಂತಾಜನಕವಾಗಿದೆ.
ಘಟನೆ ಕುರಿತು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv