ಶಿವಮೊಗ್ಗ: ಅನ್ಯ ಧರ್ಮದವರಾದ ನಾವು ಮದುವೆಯಾಗಲು ಸಾಧ್ಯವಿಲ್ಲ ಎಂದು ತಿಳಿದು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗದ ನ್ಯೂಮಂಡ್ಲಿಯಲ್ಲಿ ನಡೆದಿದೆ.
ನ್ಯೂಮಂಡ್ಲಿ ಕೌಶಿಕ್ (19) ಹಾಗೂ ಸಿಂಗದೂರು ಸಮೀಪದ ಹುಲಿದೇವರ ಬನ ಗ್ರಾಮದ ಮೆಹೆತಾಜ್ ಶಿರಿನ್ (18) ಆತ್ಮಹತ್ಯೆಗೆ ಶರಣಾಗಿರುವ ಪ್ರೇಮಿಗಳು. ಮೃತ ಪ್ರೇಮಿಗಳು ಪ್ರಥಮ ಬಿಕಾಂ ವಿದ್ಯಾರ್ಥಿಗಳಾಗಿದ್ದರು.
ಹುಲಿದೇವರ ಬನ ಗ್ರಾಮದ ಮೆಹೆತಾಜ್ ಶಿವಮೊಗ್ಗದ ಹಾಸ್ಟೆಲ್‍ನಲ್ಲಿದ್ದುಕೊಂಡು ಕಾಲೇಜಿಗೆ ಹೋಗುತ್ತಿದ್ದಳು. ಒಂದೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಕೌಶಿಕ್ ಹಾಗೂ ಮೆಹೆತಾಜ್ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಇಬ್ಬರು ಬೇರೆ ಬೇರೆ ಧರ್ಮದವರಾಗಿದ್ದರಿಂದ ಮದುವೆಗೆ ಮನೆಯಲ್ಲಿ ಒಪ್ಪುವುದಿಲ್ಲ ಎನ್ನುವ ಭಯ ಆರಂಭವಾಗಿತ್ತು. ಹೀಗಾಗಿ ಕೌಶಿಕ್ ಮೆಹೆತಾಜ್‍ಳನ್ನು ಇಂದು ಮನೆಗೆ ಕರೆದುಕೊಂಡು ಬಂದಿದ್ದ. ಇತ್ತ ಕೌಶಿಕ್ ತಾಯಿ ಸ್ನೇಹಿತೆಯರ ಜೊತೆಗೆ ಹಣಗೆರೆ ಕಟ್ಟೆಗೆ ಹೋಗಿದ್ದರು. ಹೀಗಾಗಿ ಮನೆಯಲ್ಲಿ ಯಾರು ಇರಲಿಲ್ಲ. ಈ ವೇಳೆ ಕೌಶಿಕ್ ಹಾಗೂ ಮೆಹೆತಾಜ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ಯುವಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ದೊಡ್ಡಪೇಟೆ ಪೊಲೀಸರು, ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.