ಶಿವಮೊಗ್ಗ: ಶೀಲ ಶಂಕಿಸಿ ಪ್ರೇಯಸಿ ಹತ್ಯೆಗೈದಿದ್ದ ಅಪರಾಧಿಗೆ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಜೀವಾವಧಿ ಶಿಕ್ಷೆಗೊಳಗಾದ ಅಪರಾಧಿಯನ್ನು ರಮೇಶ್ ಎಂದು ಗುರುತಿಸಲಾಗಿದ್ದು, ಶಿವಮೊಗ್ಗ ತಾಲೂಕು ಕುಂಸಿ ಹೋಬಳಿಯ ರಾಮಿನಕೊಪ್ಪ ನಿವಾಸಿಯಾಗಿದ್ದಾನೆ. ಪ್ರಕರಣದ ಕುರಿತು ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತಿತ್ತು. ರಮೇಶ್ ಕೊಲೆ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಕುಡುವಕ್ಕಲಿಗರ್ ಎಂ.ಜಿ. ಅವರು ಅಪರಾಧಿಗೆ ಐದು ಸಾವಿರ ರೂ. ದಂಡ ಹಾಗೂ ಜೀವಾವಧಿ ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಎ.ಎಂ.ಸುರೇಶಕುಮಾರ್ ವಾದ ಮಂಡಿಸಿದ್ದರು.
ಅಪರಾಧಿ ರಮೇಶನಿಗೆ ವಿವಾಹವಾಗಿ ಇಬ್ಬರು ಮಕ್ಕಳಿದ್ದಾರೆ. ಅದೇ ಗ್ರಾಮದ ಕೊಲೆಯಾದ ಪ್ರೇಯಸಿ ಮಂಜುಳಾಗೆ ಸಹ ಮದುವೆಯಾಗಿತ್ತು. ಆದರೆ ರಮೇಶ್ ಮತ್ತು ಮಂಜುಳ ನಡುವೆ ಅಕ್ರಮ ಸಂಬಂಧ ಇದ್ದಿದ್ದರಿಂದ ಕಳೆದ 20 ವರ್ಷಗಳ ಹಿಂದೆ ತನ್ನ ಹೆಂಡತಿ ಮಕ್ಕಳನ್ನು ಬಿಟ್ಟಿದ್ದ. ಕೊಲೆಯಾದ ಮಂಜುಳ ಸಹ ಗಂಡನನ್ನು ತೊರೆದು ರಮೇಶನ ಜೊತೆ ಬಂದಿದ್ದಳು. ಇಬ್ಬರು ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಹೀಗೆ ಜೀವನ ಸಾಗಿಸುತ್ತಿದ್ದರು. ಆದರೆ ರಮೇಶನಿಗೆ ಪ್ರೇಯಸಿ ಮಂಜುಳಾಗೆ ಬೇರೆ ಗಂಡಸರ ಜೊತೆ ಅನೈತಿಕ ಸಂಬಂಧ ಇದೆ ಎಂಬ ಅನುಮಾನ ಕಾಡಲು ಆರಂಭವಾಗಿದೆ. ಹೀಗಾಗಿ ಇದೇ ವಿಷಯಕ್ಕೆ ಇಬ್ಬರ ನಡುವೆ ಆಗಾಗ್ಗೆ ಜಗಳ ಸಹ ನಡೆಯುತಿತ್ತಂತೆ. ಇದರಿಂದ ಬೇಸತ್ತಿದ್ದ ರಮೇಶ್ ಪ್ರೇಯಸಿ ಮಂಜುಳಾಳನ್ನು ಕೊಲೆ ಮಾಡಬೇಕು ಎಂದುಕೊಂಡಿದ್ದ.
2017ರ ಜುಲೈ 3 ರಂದು ಆರೋಪಿ ರಮೇಶ್ ಮಂಜುಳಾಳನ್ನು ಶಿವಮೊಗ್ಗದ ರಾಗಿಗುಡ್ಡದ ಬಳಿ ಕರೆದುಕೊಂಡು ಹೋಗಿದ್ದ. ಇದಕ್ಕೂ ಮೊದಲು ಆರೋಪಿ ರಮೇಶ್ ಹರಿತವಾದ ಮಚ್ಚನ್ನು ಬೇಲಿಯೊಳಗೆ ಬಚ್ಚಿಟ್ಟು ಬಂದಿದ್ದ. ಮೊದಲೇ ಯೋಚಿಸಿದಂತೆ ಮಂಜುಳಾಳನ್ನು ರಾಗಿಗುಡ್ಡ ಬಳಿ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಅಲ್ಲಿಯೂ ಜಗಳವಾಡಿದ್ದಾರೆ. ಜಗಳ ನಡೆದ ಸ್ವಲ್ಪದರಲ್ಲೇ ರಮೇಶ್ ಬೇಲಿಯೊಳಗೆ ಬಚ್ಚಿಟ್ಟಿದ್ದ ಮಚ್ಚನ್ನು ತೆಗೆದು ಕೊಲೆ ಮಾಡಿ, ನಂತರ ತಾನೇ ಪೊಲೀಸರಿಗೆ ಶರಣಾಗಿದ್ದನು. ಘಟನೆ ನಂತರ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ರಮೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.