-ಲೈವ್ ನಲ್ಲೇ ಯುವತಿಯಿಂದ ಎಚ್ಚರಿಕೆಯ ಸಂದೇಶ
ತುಮಕೂರು: ಪ್ರೇಮ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರೇಮಿಗಳು ಫೇಸ್‍ಬುಕ್ ಲೈವ್ ಮೂಲಕ ಮದುವೆಯಾದ ಅಪರೂಪದ ಘಟನೆ ನಡೆದಿದೆ.
ಜಿಲ್ಲೆಯ ಮಧುಗಿರಿ ಪಟ್ಟಣದ ಪ್ರೇಮಿಗಳಾದ ಕಿರಣ್ ಮತ್ತು ಅಂಜನಾ ಫೇಸ್‍ಬುಕ್ ಲೈವ್ ನಲ್ಲಿ ಮದುವೆಯಾದ ಜೋಡಿ. ಈ ಯುವ ಜೋಡಿ ಕಳೆದ ಮೂರು-ನಾಲ್ಕು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿ ವಿಚಾರ ಮನೆಯವರಿಗೆ ತಿಳಿದಿದೆ. ಆದರೆ ಇವರಿಬ್ಬರ ಮದುವೆಗೆ ಯುವತಿ ತಂದೆ ಜೆಡಿಎಸ್ ಮುಖಂಡರೂ ಆದ ತಿಮ್ಮರಾಜು ವಿರೋಧ ವ್ಯಕ್ತಪಡಿಸಿದ್ದಾರೆ.
ಮನೆಯಲ್ಲಿ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಕಿರಣ್ ಮತ್ತು ಅಂಜನಾ ಮನೆಯಿಂದ ಓಡಿ ಹೋಗಿದ್ದಾರೆ. ಬಳಿಕ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಮದುವೆಯಾಗುವ ದೃಶ್ಯವನ್ನು ಕಿರಣ್ ಫೇಸ್ ಬುಕ್ ಪೇಜ್ ನಲ್ಲಿ ಲೈವ್ ಮಾಡಿದ್ದಾರೆ. ಈ ನಡುವೆ ಯುವತಿ ತಂದೆ, ಮಗಳು ಕಾಣೆಯಾಗಿದ್ದಾಳೆ ಎಂದು ಮಧುಗಿರಿ ಪೊಲೀಸರಿಗೆ ದೂರು ನೀಡಿದ್ದಾರೆ.
“ನಾನು ಕಾಣೆಯಾಗಿಲ್ಲ, ಪ್ರೀತಿಸಿದ ಯುವಕನ ಜೊತೆ ಮದುವೆಯಾಗಿದ್ದೀನಿ. ಜೊತೆಗೆ ನಾವಿಬ್ಬರು ಒಪ್ಪಿ ಮದುವೆಯಾಗಿದ್ದೇವೆ. ನಮ್ಮನ್ನು ದೂರ ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ಒಂದು ವೇಳೆ ಪೊಲೀಸರು ನಮಗೆ ತೊಂದರೆ ಕೊಟ್ಟರೆ ಅವರ ಹೆಸರು ಹೇಳಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ” ಎಂದು ಫೇಸ್ ಬುಕ್ ಲೈವ್ ನಲ್ಲೇ ಯುವತಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾಳೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews