ಕೊಪ್ಪಳ: ಪ್ರೀತಿಸಿ ಮದುವೆಯಾದ ಜೋಡಿಗೆ ಯುವತಿಯ ಪೋಷಕರೇ ವಿಲನ್ ಆಗಿ ಕಿರುಕುಳ ನೀಡಲು ಶುರು ಮಾಡಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಜಿಲ್ಲೆಯ ಕುಷ್ಟಗಿ ಪಟ್ಟಣದ ರಮೇಶ್ ಮತ್ತು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಗೋನಾಳ ಗ್ರಾಮದ ಸಂಗೀತಾ ಪರಸ್ಪರ ಪ್ರೀತಿಸುತ್ತಿದ್ದರು. ಅಲ್ಲದೆ ಇಬ್ಬರು ಜುಲೈ ತಿಂಗಳಿನಲ್ಲಿ ಮದುವೆ ಕೂಡ ಆಗಿದ್ದರು. ಇಬ್ಬರ ಜಾತಿ ಬೇರೆ ಬೇರೆ ಆಗಿದ್ದರಿಂದ ಯುವತಿಯ ಪೋಷಕರು ಪ್ರೀತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಯುವತಿಯ ಪೋಷಕರು ಈಗಾಗಲೇ ಇಬ್ಬರನ್ನು ದೂರ ಮಾಡಿ ತಮ್ಮ ಮಗಳನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಮನೆಗೆ ಕರೆದುಕೊಂಡು ಹೋದ ನಂತರ ಹಲ್ಲೆ ಮಾಡಿದ್ದಲ್ಲದೇ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಪೋಷಕರ ಕಿರುಕುಳದಿಂದ ಬೇಸತ್ತ ಸಂಗೀತಾ ಮತ್ತೆ ಮನೆ ಬಿಟ್ಟು ಓಡಿ ಬಂದಿದ್ದು, ರಕ್ಷಣೆ ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸದ್ಯ ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಬಂದು ರಕ್ಷಣೆಗಾಗಿ ಬೇಡಿಕೊಂಡಿದ್ದಾರೆ.
ಕುಷ್ಟಗಿ ಪಟ್ಟಣದಲ್ಲಿ ಗ್ಯಾರೇಜ್ ಇಟ್ಟುಕೊಂಡಿರುವ ರಮೇಶ್ ಕಳೆದ ಎರಡು ವರ್ಷಗಳಿಂದ ಸಂಗೀತಾಳನ್ನು ಪ್ರೀತಿಸುತ್ತಿದ್ದನು. ನಾಲ್ಕು ತಿಂಗಳ ಹಿಂದೆಯೇ ಇಬ್ಬರು ದೇವಸ್ಥಾನದಲ್ಲಿ ಮದುವೆಯಾಗಿದ್ದು, ಯುವತಿ ಪೋಷಕರು ನಿರಂತರ ಕಿರುಕುಳ ನೀಡುತ್ತಿದ್ದಾರೆ. ನಾವು ವಯಸ್ಕರಾಗಿದ್ದು, ಜೊತೆಗೆ ಬಾಳಲು ಅವಕಾಶ ಮಾಡಿಕೊಡಿ ಎಂದು ಬೇಡಿಕೊಳ್ಳುತ್ತಿದ್ದಾರೆ.