ಚಿಕ್ಕಮಗಳೂರು: ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರೇಮಿಗಳ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.
ನೂತನ್(25) ಹಾಗೂ ಅಪೂರ್ವ(22) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಆತ್ಮಹತ್ಯೆಗೆ ಶರಣಾಗುವ ಮುನ್ನ ನೂತನ್ ಹಾಗೂ ಅಪೂರ್ವ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬಳಿಕ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ನೂತನ್ ಹಾಗೂ ಅಪೂರ್ವ ಬೇರೆ-ಬೇರೆ ಜಾತಿಯಾಗಿದರಿಂದ ಹೆತ್ತವರು ಇವರ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ನೂತನ್ ಮನೆ ಕಡೆ ಅನುಕೂಲಸ್ಥವಾಗಿದ್ದು, ಹತ್ತಾರು ಎಕರೆ ಕಾಫಿ ತೋಟವಿತ್ತು.
ಆದರೆ ಅಪೂರ್ವಳದ್ದು ಮಧ್ಯಮ ಕುಟುಂಬವಾಗಿದ್ದು, ತಾಯಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಇಬ್ಬರ ಮದುವೆಗೆ ಹೆತ್ತವರು ವಿರೋಧ ವ್ಯಕ್ತಪಡಿಸಿದರಿಂದ ಎರಡು ದಿನಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಈ ವಿಷಯ ತಿಳಿದ ನೂತನ್ ಹಾಗೂ ಅಪೂರ್ವ ಪೋಷಕರು ಕೂಡಲೇ ಇಬ್ಬರನ್ನು ಹೆಚ್ವಿನ ಚಿಕಿತ್ಸೆಗೆ ಮಂಗಳೂರಿಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದ ಕಾರಣ ಇಬ್ಬರೂ ಮೃತಪಟ್ಟು ಸಾವಿನಲ್ಲೂ ಒಂದಾಗಿದ್ದಾರೆ.
ಈ ಬಗ್ಗೆ ಬಣಕಲ್ ಹಾಗೂ ಗೋಣಿಬೀಡು ಎರಡೂ ಠಾಣೆಯಲ್ಲೂ ಯುಡಿಆರ್(ಅಸ್ವಾಭಾವಿಕ ಸಾವಿನ ವರದಿ) ಅಡಿಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.