ಹೈದರಾಬಾದ್: ಪೋಷಕರು ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ತೆಲಂಗಾಣದ ಜಗ್ತಿಯಲ್‍ನಲ್ಲಿ ನಡೆದಿದೆ.
ಬುಕ್ಯ ಶಿರಿಶಾ ಮತ್ತು ಲಗಾವತ್ ಮಹಿಪಾಲ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಶಿರಿಶಾ ಹಾಗೂ ಮಹಿಪಾಲ್ ಒಂದೇ ಕಾಲೇಜಿನಲ್ಲಿ ಪದವಿ ಓದುತ್ತಿದ್ದು, ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.
ತಮ್ಮ ಪ್ರೀತಿಯ ವಿಷಯವನ್ನು ಶಿರಿಶಾ ಹಾಗೂ ಮಹಿಪಾಲ್ ಪೋಷಕರ ಬಳಿ ಹೇಳಿದ್ದರು. ಆದರೆ ಅವರು ಇಬ್ಬರ ಪ್ರೀತಿಯನ್ನು ನಿರಕಾರಿಸಿದ್ದರು. ಅಲ್ಲದೆ ಶಿರಿಶಾ ಪೋಷಕರು ಆಕೆಗೆ ಬೇರೊಬ್ಬ ವ್ಯಕ್ತಿ ಜೊತೆ ನಿಶ್ಚಿತಾರ್ಥ ಮಾಡಿಸಿದ್ದರು.
ಪೋಷಕರು ತಮ್ಮ ಪ್ರೀತಿಯನ್ನು ನಿರಾಕರಿಸಿದ್ದರಿಂದ ಬೇಸತ್ತ ಶಿರಿಶಾ ಹಾಗೂ ಮಹಿಪಾಲ್ ಶನಿವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮಸ್ಥರು ಇಬ್ಬರ ಮೃತದೇಹವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.