– ನಿಯಮ ಉಲ್ಲಂಘಿಸಿದ್ದಕ್ಕೆ ಪ್ರೇಮಿಗಳ ವಿರುದ್ಧ ಪ್ರಕರಣ ದಾಖಲು
ತಿರುವನಂತಪುರ: ಕೊರೊನಾ ಭೀತಿಯಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಆದರೆ ಈ ಲಾಕ್‍ಡೌನ್ ನಡುವೆಯೂ ಪ್ರೇಮಿಗಳು ಓಡಿ ಹೋಗಿರುವ ಘಟನೆ ಕೇರಳದ ಕೊಜಿಕೊಡ್‍ನಲ್ಲಿ ನಡೆದಿದೆ.
21 ವರ್ಷದ ಹುಡುಗಿ ತನ್ನ 23 ವರ್ಷದ ಪ್ರೇಮಿಯೊಂದಿಗೆ ಓಡಿಹೋಗಿದ್ದಾಳೆ. ಪ್ರೇಮಿಗಳಿಬ್ಬರು ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರ ಜಾತಿ ಬೇರೆಯಾಗಿರುವುದರಿಂದ ಹುಡುಗಿಯ ಕುಟುಂಬದವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪ್ರೇಮಿಗಳಿಬ್ಬರು ಲಾಕ್‍ಡೌನ್ ನಡುವೆಯೂ ಶನಿವಾರ ರಾತ್ರಿ ಓಡಿ ಹೋಗಿದ್ದಾರೆ.
ಇತ್ತ ಹುಡುಗಿಯ ತಂದೆ ಮಗಳು ನಾಪತ್ತೆಯಾದ ದೂರು ದಾಖಲಿಸಿದ್ದರು. ಪೊಲೀಸರು ಇಬ್ಬರನ್ನು ಪತ್ತೆ ಮಾಡಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದಾರೆ. ಈ ವೇಳೆ ಇಬ್ಬರು ಮೇಜರ್ ಆಗಿದ್ದರಿಂದ ಪ್ರೇಮಿಗಳಿಗೆ ಹೋಗಲು ಅವಕಾಶ ನೀಡಲಾಗಿದೆ. ಅಲ್ಲದೇ ಹುಡಗಿ ತನ್ನ ಸ್ವಂತ ಇಚ್ಚೆಯಂತೆ ತನ್ನ ಗೆಳೆಯನೊಂದಿಗೆ ಹೋಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ನ್ಯಾಯಾಲಯದ ಆದೇಶದ ಮೇರೆಗೆ ಪ್ರೇಮಿಗಳು ನಿಯಮ ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕೋವಿಡ್ -19 ತಡೆಯುವ ಹಿನ್ನೆಲೆಯಲ್ಲಿ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಕೇರಳದಲ್ಲಿ ಲಾಕ್‍ಡೌನ್ ನಿಯಮ ಕಠಿಣವಾಗಿದ್ದು, ಯಾವುದೇ ಕಾರಣಕ್ಕೂ ನಿಯಮ ಉಲ್ಲಂಘಿಸಬಾರದು ಎಂದು ಆದೇಶಿಸಲಾಗಿದೆ. ಆದರೆ ಈ ಪ್ರೇಮಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಒಟ್ಟಿಗೆ ಓಡಿಹೋಗುವ ಮೂಲಕ ಲಾಕ್‍ಡೌನ್ ನಿಯಮ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಇಬ್ಬರ ಪ್ರೇಮಿಗಳ ಮೇಲೆ ಐಪಿಸಿ ಸೆಕ್ಷನ್ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.