ಕೋಲಾರ: ಕೊಳೆತ ಸ್ಥಿತಿಯಲ್ಲಿ ಪ್ರೇಮಿಗಳ ಶವ ಪತ್ತೆಯಾಗಿರುವ ಘಟನೆ ಮುಳಬಾಗಿಲು ತಾಲೂಕಿನ ದೇವರಾಯಸಮುದ್ರ ಗ್ರಾಮದ ಬಳಿ ನಡೆದಿದೆ.
ಶ್ರೀನಿವಾಸಪುರದ ಜೆ.ವಿ ಕಾಲೋನಿ ನಿವಾಸಿ ವರಲಕ್ಷ್ಮಿ (20) ಹಾಗೂ ಕೋಲಾರ ತಾಲೂಕಿನ ಪಚ್ಚಾರ್ಲಹಳ್ಳಿಯ ಸುರೇಶ್ (24) ಶವವಾಗಿ ಪತ್ತೆಯಾದ ಪ್ರೇಮಿಗಳು. ದೇವರಾಯಸಮುದ್ರ ಗ್ರಾಮದ ಹೊರವಲಯದಲ್ಲಿರುವ ಶಂಕರ್ ರೆಡ್ಡಿ ಎಂಬವರ ಪಂಚವಟಿ ಫಾರಂನಲ್ಲಿ ಪ್ರೇಮಿಗಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪಂಚವಟಿ ಫಾರಂನಲ್ಲಿ ಕೆಲಸ ಮಾಡುವ ಅನಸೂಯಮ್ಮ ಎಂಬವರು ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಮರದಲ್ಲಿ ನೇತಾಡುತ್ತಿದ್ದ ಹಾಗೂ ಕೊಳೆತ ಸ್ಥಿತಿಯಲ್ಲಿದ್ದ ಪ್ರೇಮಿಗಳ ಶವವನ್ನು ನೋಡಿದ್ದಾರೆ. ಇದರಿಂದಾಗಿ ಗಾಬರಿಗೊಂಡ ಅವರು ತಕ್ಷಣವೇ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಈ ಕುರಿತು ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಮುಳಬಾಗಿಲು ಗ್ರಾಮಾಂತರ ಠಾಣಾ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಮೃತ ದೇಹದ ಬಳಿ ಇದ್ದ ಬ್ಯಾಗ್ ಹಾಗೂ ಮೊಬೈಲ್‍ನಲ್ಲಿ ಪ್ರೇಮಿಗಳ ಗುರುತು ಪತ್ತೆಯಾಗಿದೆ. ವರಲಕ್ಷ್ಮಿ ಹಾಗೂ ಸುರೇಶ್ ಕಾಣೆಯಾಗಿರುವ ಕುರಿತು ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಮೇ-22 ರಂರು ದೂರು ದಾಖಲಾಗಿತ್ತು. ಅಂದೇ ಇವರಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ವರಲಕ್ಷ್ಮಿ ಹಾಗೂ ಸುರೇಶ್ ಒಂದೇ ಮರಕ್ಕೆ ಒಂದೇ ವೇಲ್‍ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಇಬ್ಬರ ಸಾವಿಗೆ ಕಾರಣವೇನು, ಸಾವಿನ ಹಿಂದಿನ ರಹಸ್ಯವೇನು ಎನ್ನುವುದು ತಿಳಿದು ಬಂದಿಲ್ಲ.
ಈ ಸಂಬಂಧ ಮುಳಬಾಗಿಲು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.