ಅಮರ ಪ್ರೇಮಿಗಳಾಗಬೇಕೆಂದು ಗೋಳಗುಮ್ಮಟದಿಂದ ಹಾರಿದ ಪ್ರೇಮಿ -ಇತ್ತ ವಿಷ ಕುಡಿದ ಪ್ರಿಯತಮೆ

Public TV
3 Min Read
BIJ LOVE STORY copy

ವಿಜಯಪುರ: ಹಾಟಸ್ಪಾಟ್ ಆಗಿರುವ ಗೋಳಗುಮ್ಮಟದಲ್ಲಿ ಇದೇ ಮೊಟ್ಟಮೊದಲ ಬಾರಿಗೆ ಭಗ್ನ ಪ್ರೇಮಿಯೊಬ್ಬನ ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ಇತ್ತ ಪ್ರೇಮಿಯ ಆತ್ಮಹತ್ಯೆಯ ಬಗ್ಗೆ ತಿಳಿದ ಪ್ರಿಯತಮೆ ವಿಷ ಸೇವಿಸಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಂತಹ ದುರಂತ ಕಥೆ ಜಿಲ್ಲೆಯಲ್ಲಿ ನಡೆದಿದೆ.

ಸೋಮನಾಥ ತರನಾಳಕರ ಮತ್ತು ಸಂಯುಕ್ತಾ ಭೈರಿ ಆತ್ಮಹತ್ಯೆಗೆ ಶರಣಾದ ಅಮರ ಪ್ರೇಮಿಗಳು. ಸೆಪ್ಟೆಂಬರ್ 24 ರಂದು ಸಂಜೆ ವಿಶ್ವವಿಖ್ಯಾತ ಗೋಳಗುಮ್ಮಟ ವೀಕ್ಷಿಸಲು ಬಂದಿದ್ದ ಯುವಕನೊಬ್ಬ ಒಳ ಗ್ಯಾಲರಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದನು. ಆದರೆ ಯುವಕನ ಸಾವಿಗೆ ನಿಖರ ಕಾರಣ ಮಾತ್ರ ತಿಳಿದು ಬಂದಿರಲಿಲ್ಲ. ಇದೀಗ ಆತ ಅಮರ ಪ್ರೇಮಿಯಾಗಲು ಗೋಳಗುಮ್ಮಟದ ಮೇಲಿಂದ ಹಾರಿ ಪ್ರಾಣ ಬಿಟ್ಟಿದ್ದಾನೆ ಎಂಬುದು ಮೂಲಗಳ ಪ್ರಕಾರ ಬೆಳಕಿಗೆ ಬಂದಿದೆ.

BIJ 2

ಮೂಲತಃ ಮಹಾರಾಷ್ಟ್ರ ರಾಜ್ಯದ ಸೋಲಾಪುರ ನಿವಾಸಿಯಾದ ಸೋಮನಾಥ ತರನಾಳಕರ ತಾನು ಓದುತ್ತಿದ್ದ ದಯಾನಂದ ಕಾಲೇಜಿನಲ್ಲಿಯೇ ಬಿಕಾಂ ವಿದ್ಯಾರ್ಥಿನಿ ಸಂಯುಕ್ತಾ ಭೈರಿಯನ್ನು ಪ್ರೀತಿಸುತ್ತಿದ್ದನು. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದುದರಿಂದ ಇಬ್ಬರ ನಡುವೆ ಪ್ರೀತಿ ಆವರಿಸಿ ಒಬ್ಬರನ್ನೊಬ್ಬರು ಬಿಟ್ಟಿರಲಾರದ ಸ್ಥಿತಿಗೆ ಬಂದುಬಿಟ್ಟಿತ್ತು. ಇದೇ ಸಮಯದಲ್ಲಿ ಸಂಯುಕ್ತಾಗೆ ಆಕೆಯ ಪೋಷಕರು ಬೇರೆಡೆ ವರ ನೋಡಿ ಮದುವೆ ನಿಶ್ಚಯಿಸಿದ್ದರು ಎನ್ನಲಾಗಿದೆ.

ಈ ವಿಚಾರ ತಿಳಿದ ಸೋಮನಾಥ ಸಂಯುಕ್ತಾಳನ್ನು ಬಿಟ್ಟು ಬದುಕಲಾಗುವುದಿಲ್ಲ ಎಂದು ಆಕೆಗೆ ತಿಳಿಸಿದ್ದಾನೆ. ಆಕೆಯೂ ಸಹ ಅದೇ ಮಾತನ್ನು ಸೋಮನಾಥನಿಗೆ ಹೇಳುತ್ತಾಳೆ. ಹೀಗಾಗಿ ಒಂದು ವೇಳೆ ನಾವೇನಾದರು ಸತ್ತರೆ ಜಗತ್ತು ನಮ್ಮನ್ನ ನೆನಪಿಸಿಕೊಳ್ಳಬೇಕು ಆಗ ನಾವು ಅಮರ ಪ್ರೇಮಿಗಳಾಗುತ್ತೇವೆ ಎಂದು ಮಾತನಾಡಿಕೊಂಡಿದ್ದರು. ಮನೆಯಲ್ಲಿ ವಿರೋಧ ಇರುವುದರಿಂದ ನಾವು ಒಟ್ಟಿಗೆ ಬದುಕಲು ಸಾಧ್ಯವಿಲ್ಲ ಎಂದು ನಿರ್ಧರಿಸಿದ ಮೇಲೆ ನೇರ ಗೋಳಗುಮ್ಮಟಕ್ಕೆ ಬಂದ ಸೋಮನಾಥ ಪಿಸುಗುಟ್ಟುವ ಗ್ಯಾಲರಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಥಳೀಯ ಬಸವರಾಜ ಲಗಳಿ ಅವರು ಹೇಳಿದ್ದಾರೆ.

BIJ 4

ಅತ್ತ ಸೋಮನಾಥನ ಆತ್ಮಹತ್ಯೆ ಸುದ್ದಿ ತಿಳಿದ ಪ್ರೇಯಸಿ ಸಂಯುಕ್ತಾ ಕೂಡ ವಿಷ ಸೇವಿಸಿ ಮೃತಪಟ್ಟಿದ್ದಾಳೆ. ಈ ಮೂಲಕ ಸೆಪ್ಟೆಂಬರ್ 24 ಅಮರ ಪ್ರೇಮಿಗಳಿಬ್ಬರ ದುರಂತ ಕಂಡ ದಿನವಾಗಿದ್ದು ಸೋಮನಾಥನ ಆತ್ಮಹತ್ಯೆ ಪ್ರಕರಣ ಗೋಳಗುಮ್ಮಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಸೋಮನಾಥ ಹಾಗೂ ಸಂಯುಕ್ತಾ ಒಂದೇ ಕಾಲೇಜಿನಲ್ಲಿ ಓದುತ್ತಿದ್ದುದರಿಂದ ಸಹಜವಾಗಿಯೇ ಇಬ್ಬರ ನಡುವೆ ಪ್ರೀತಿ ಮೊಳಕೆಯೊಡೆದಿತ್ತು. ಬಳಿಕ ಆ ಪ್ರೀತಿ ಹೆಮ್ಮರವಾಗಿ ಬೆಳೆದು ನಿಂತಿತ್ತು. ಆದರೆ ಅದಕ್ಕೆ ಉಳಿಗಾಲವಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ಗೋಳಗುಮ್ಮಟದ ಮೇಲಿಂದ ಹಾರಿದ ಸೋಮನಾಥ ಮೃತಪಟ್ಟರೂ ಸಹ ಆತನ ಆತ್ಮ ಮಾತ್ರ ಸಂಯುಕ್ತಾ ಐ ಲವ್ ಯೂ, ಈ ಮಿಸ್ ಯೂ ಎಂಬುದನ್ನು ಸಾರಿ ಸಾರಿ ಹೇಳುತ್ತಿರುವಂತೆ ಭಾಸವಾಗುತ್ತಿದೆ ಅಂತಾ ಸ್ಥಳೀಯರು ಹೇಳುತ್ತಿದ್ದಾರೆ.

BIJ 5

ಅತ್ತ ಸಂಯುಕ್ತಾ ಕೂಡ ಇದೇ ಮಾತನ್ನು ಹೇಳಿ ವಿಷ ಕುಡಿದು ಸೋಲಾಪುರದ ಮರಡಿ ರಸ್ತೆಯ ಬಳಿ ಪ್ರಾಣ ಬಿಟ್ಟಿದ್ದಳು. ಚಿಗುರುವ ಹಂತದಲ್ಲಿದ್ದ ಇವರಿಬ್ಬರ ಈ ಪ್ರೇಮಕಥೆ ದುರಂತ ಅಂತ್ಯಕಂಡಿದೆ. ಈ ಮೂಲಕ ಪ್ರೀತಿಸಿ, ಮದುವೆಯಾಗಿ ನೂರು ಕಾಲ ಬಾಳಿ ಬದುಕಬೇಕಿದ್ದ ಈ ಅಮರ ಪ್ರೇಮಿಗಳು ಅರಳುವ ಮುನ್ನವೇ ಬಾಡಿ ಹೋಗಿವೆ ಎಂದು ಸ್ಥಳೀಯ ಅಶೋಕ್ ಅವರು ತಿಳಿಸಿದ್ದಾರೆ.

ಅಮರ ಪ್ರೇಮಿಗಳು ಅವರು ಅಂದುಕೊಂಡಂತೆ ಕೇವಲ ನೆನಪಿನಲ್ಲಿ ಉಳಿದುಕೊಂಡಿದ್ದಾರಷ್ಟೆ. ಇನ್ನು ಈ ದುರಂತ ಕಥೆ ಗೋಳಗುಮ್ಮಟ್ಟಕ್ಕು ಕಪ್ಪು ಚುಕ್ಕೆ ತಂದಿದ್ದು, ಇಂತಹ ದುರಂತಗಳು ಸಂಭವಿಸದಂತೆ ಇನ್ನಾದರೂ ಗೋಲಗುಂಬಜ ಆಡಳಿತಾಧಿಕಾರಿಗಳು ಎಚ್ಚೆತ್ತುಕೊಳ್ಳಲ್ಲಿ ಅನ್ನೋದು ಸ್ಥಳೀಯರ ಆಗ್ರಹವಾಗಿದೆ.

BIJ

ಪ್ರೇಮಿಗಳ ಹಾಟ್ ಸ್ಪಾಟ್:
ಪ್ರಪಂಚದ ಅದೆಷ್ಟೋ ಪ್ರೇಮಿಗಳು ತಮ್ಮ ಪ್ರೇಯಸಿಗೆ ಹಾಗೂ ಪ್ರಿಯತಮನಿಗೆ ಹೇಳಿಕೊಳ್ಳಲಾಗದ ಪ್ರೇಮ ನಿವೇದನೆಯನ್ನು ಗೋಳಗುಮ್ಮಟದ ಪಿಸುಗುಟ್ಟುವ ಗ್ಯಾಲರಿಯಲ್ಲಿ ಹೇಳಿಕೊಂಡಿದ್ದಾರೆ. ಒಂದು ಬಾರಿ ಪಿಸುಗುಟ್ಟಿದರೆ ಸಾಕು ಏಳು ಬಾರಿ ಪ್ರತಿಧ್ವನಿಸುವ ಈ ಪ್ರೇಮಸೌಧ(ವಿಶಿಷ್ಠ ಸೌಧ)ಅದೆಷ್ಟೋ ಪ್ರೇಮಿಗಳನ್ನು ಒಂದು ಮಾಡಿದೆ. ಹಾಗೆಯೇ ಕೋಟ್ಯಾಂತರ ಪ್ರೇಮ ನಿವೇದನೆಗಳು ತಮ್ಮ ಪ್ರೇಮಿಗಳಿಗೆ ತಲುಪದೆಯೇ ಇದೇ ಗೋಳಗುಮ್ಮಟದ ಗ್ಯಾಲರಿಯಲ್ಲಿಯೇ ಕಳೆದೂ ಹೋಗಿವೆ. ಹೀಗಾಗಿಯೇ ಇದನ್ನು ಪ್ರೇಮಿಗಳ ಹಾಟ್ ಸ್ಪಾಟ್ ಎಂದು ಕರೆಯಲಾಗುತ್ತದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *