ಹೈದರಾಬಾದ್: ಗೋದಾವರಿ ನದಿಗೆ ಜಿಗಿದು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆ ಪಾಶಾರ್ಲಪೂಡಿಯಲ್ಲಿ ನಡೆದಿದೆ.
ನಾಗಸುಚಿತಾ(14) ಹಾಗೂ ಶಿವ ಆತ್ಮಹತ್ಯೆಗೈದ ಪ್ರೇಮಿಗಳು. ನಾಗಸುಚಿತಾ 9ನೇ ತರಗತಿ ಓದುತ್ತಿದ್ದು, ಶಿವ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡಿಕೊಂಡಿದ್ದನು.
ನಾಗ ಸುಚಿತಾಳಿಗೆ ಶಿವನ ಮೇಲೆ ಪ್ರೀತಿಯಾಗಿತ್ತು. ಕ್ರಮೇಣ ಇವರಿಬ್ಬರ ಪ್ರೀತಿ ಮನೆಯವರಿಗೆ ತಿಳಿಯಿತು. ಪರಿಣಾಮ ಇಬ್ಬರ ಮನೆಯಲ್ಲಿಯೂ ವಿರೋಧ ವ್ಯಕ್ತವಾಗಿದ್ದು, ಮನೆಯವರು ಇಬ್ಬರಿಗೂ ಬೈದಿದ್ದರು.
ತನ್ನ ಪ್ರೀತಿಯನ್ನು ಮನೆಯವರು ನಿರಾಕರಿಸಿದ್ದರಿಂದ ಮನನೊಂದ ನಾಗಸುಚಿತಾ ತನ್ನ ಸೈಕಲ್ ತೆಗೆದುಕೊಂಡು ಸಂಬಂಧಿಕರ ಮನೆಗೆ ಹೋಗುವುದಾಗಿ ಹೇಳಿ ಹೋಗಿದ್ದಳು. ಹೀಗೆ ಸೈಕಲ್ ನಲ್ಲಿ ಹೋಗುತ್ತಿದ್ದಾಗ ದಾರಿ ಮಧ್ಯೆ ಶಿವ ಸಿಕ್ಕಿದ್ದಾನೆ. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡ ಅವರಿಬ್ಬರೂ ಜೊತೆಯಾಗಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿದ್ದು, ಗೋದಾವರಿ ಬ್ರಿಡ್ಜ್ ನಿಂದ ನದಿಗೆ ಜಿಗಿದಿದ್ದಾರೆ.