ಇಬ್ಬರು ಒಟ್ಟಿಗೆ ಬದುಕಲು ಆಗಲ್ಲವೆಂದು ಯುವ ಪ್ರೇಮಿಗಳು ಆತ್ಮಹತ್ಯೆ

Public TV
1 Min Read
BENGALURU LOVERS SUICIDE

ಬೆಂಗಳೂರು: ನೈಸ್ ರಸ್ತೆ (Nice Road Bengaluru) ಸಮೀಪದ ಕೆರೆಗೆ ಹಾರಿ ಯುವ ಪ್ರೇಮಿಗಳು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ಕಾಲೇಜು ವಿದ್ಯಾರ್ಥಿನಿ ಅಂಜನಾ (20) ಮತ್ತು ಶ್ರೀಕಾಂತ್ (25) ಸೂಸೈಡ್ ಮಾಡಿಕೊಂಡ ಜೋಡಿ. ವಿದ್ಯಾರ್ಥಿನಿಯು ತಲಘಟ್ಟಪುರ ಸಮೀಪದ ಅಂಜನಾಪುರ ವಾಸವಿದ್ದರೆ, ಯುವಕ ಶ್ರೀಕಾಂತ್ ಕೋಣನಕುಂಟೆ ನಿವಾಸಿ. ಇವರಿಬ್ಬರು ಜುಲೈ 1 ರಂದು ನಾಪತ್ತೆಯಾಗಿದ್ದರು.

ಕಳೆದ ಕೆಲ ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸ್ತಿದ್ದರು. ಆದರೆ ವಿದ್ಯಾರ್ಥಿನಿ ಪೋಷಕರು ಇವರಿಬ್ಬರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರೂ ನಾಪತ್ತೆಯಾಗಿದ್ದರು. ಹೀಗಾಗಿ ಪೋಷಕರು ಕೋಣನಕುಂಟೆ ಮತ್ತು ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ಸಂಬಂಧ ಡಿಸಿಪಿ ಲೋಕೇಶ್ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಶ್ರೀಕಾಂತ್ ಗೆ ಬೇರೊಬ್ಬರ ಜೊತೆಗೆ ವಿವಾಹವಾಗಿದೆ. ಆದರೂ ಅಂಜನಾಳನ್ನ ಪ್ರೀತಿ ಮಾಡ್ತಿದ್ದ. ಇಬ್ಬರು ಒಟ್ಟಿಗೆ ಬದುಕಲು ಆಗಲ್ಲ ಎಂದು ಸಾಯುವ ನಿರ್ಧಾರ ಮಾಡಿದ್ದಾರೆ ಎಂದು ಹೇಳಿದರು.

DCP LOKESH

ಮೊದಲು ಶ್ರೀಕಾಂತ್ ಮೃತದೇಹ ಕೆರೆಯಲ್ಲಿ ಕಾಣಿಸಿದ್ದು, ಶವವನ್ನು ಪೊಲೀಸರು ಮೇಲೆತ್ತಿದ್ದಾರೆ. ಈ ವೇಳೆ ಅಂಜನಾ ಮೃತದೇಹ ಕೂಡ ಮೇಲೆ ಬಂದಿದೆ. ಅಂಜನಾ ಮೃತದೇಹದ ಬಗ್ಗೆ ಪೊಲೀಸರಿಗೂ ಮಾಹಿತಿ ಇರೋದಿಲ್ಲ. ಆದರೆ ಇಬ್ಬರು ಕೈಗೆ ಹಗ್ಗ ಕಟ್ಟಿಕೊಂಡಿದ್ದರಿಂದ ಇಬ್ಬರ ಮೃತದೇಹ ಒಟ್ಟಿಗೆ ಸಿಕ್ಕಿದೆ.

ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆರೆ ಬಳಿ ನಿಂತಿದ್ದ ಆಟೋದಲ್ಲಿ ಮೊಬೈಲ್ ಸಿಕ್ಕಿದ್ದು, ಅದರಲ್ಲಿ ಸಾವಿಗೆ ಕಾರಣ ತಿಳಿಸಿರುವ ವಿಡಿಯೋವೊಂದು ಪೊಲೀಸರಿಗೆ ಸಿಕ್ಕಿದೆ. ವಿಡಿಯೋದಲ್ಲಿ ಯುವತಿ ಅಂಜನಾ, ನಮ್ಮ ಸಾವಿಗೆ ಯಾರೂ ಕಾರಣ ಅಲ್ಲ. ನಾವಿಬ್ಬರು ಒಟ್ಟಿಗೆ ಬದುಕಲು ಆಗಲ್ಲ. ಹಾಗಾಗಿ ಸಾಯ್ತಿದ್ದೇವೆ ಎಂದು ತಿಳಿಸಿದ್ದಾರೆ. ಸದ್ಯ ತಲಘಟ್ಟಪುರ ಪೊಲೀಸರು ಮೊಬೈಲ್ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

Share This Article