ಬಳ್ಳಾರಿ: ಒಂದೇ ಸೀರೆಯಲ್ಲಿ ನೇಣು ಬಿಗಿದುಕೊಂಡು ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಇದು ಕೊಲೆಯೇ ಎನ್ನುವ ಶಂಕೆ ವ್ಯಕ್ತವಾಗಿದೆ.
ಕಳೆದ ಸೆಪ್ಟಂಬರ್ 29ರಂದು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಚಿರತೆಗುಂಡು ಗ್ರಾಮದಲ್ಲಿ ಪ್ರೇಮಿಗಳ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಪ್ರೇಮಿಗಳಿಬ್ಬರನ್ನು ಕೊಲೆ ಮಾಡಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಿಂಬಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಾಗಿದೆ.
ಕೂಡ್ಲಗಿ ತಾಲೂಕಿನ ಚಿರತೆಗುಂಡು ಗ್ರಾಮದ ಪ್ರೇಮಿಗಳಾಗಿದ್ದ ತಿಪ್ಪೇಸ್ವಾಮಿ ಹಾಗೂ ಶೋಭಿತಾ ಆತ್ಮಹತ್ಯೆ ಮಾಡಿಕೊಂಡಿಲ್ಲ ಬದಲಾಗಿ ಇಬ್ಬರನ್ನು ಕೊಲೆ ಮಾಡಿ ಆತ್ಮಹತ್ಯೆಯೆಂದು ಬಿಂಬಿಸಲಾಗಿದೆ ಎಂದು ಮೃತ ಯುವಕನ ತಂದೆ ಇದೀಗ ಕೂಡ್ಲಗಿ ನ್ಯಾಯಾಲಯದಲ್ಲಿ ದೂರು ನೀಡಿದ್ದಾರೆ.
ತಿಪ್ಪೇಸ್ವಾಮಿ ಹಾಗೂ ಶೋಭಿತಾ ಕಳೆದ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ವಿಚಾರ ಯುವತಿಯ ಮನೆಯಲ್ಲಿ ಗೊತ್ತಾಗುತ್ತಿದ್ದಂತೆ ಶೋಭಿತಾಳನ್ನು ಬೇರೆ ಯುವಕನಿಗೆ ಕೊಟ್ಟು ಮದುವೆ ಮಾಡಿದ್ದರು. ಆದರೆ ಪ್ರೇಮಿಯನ್ನು ಬಿಟ್ಟು ಬಾಳಲಾರದೇ ಶೋಭಿತಾ ಸೆಪ್ಟಂಬರ್ ತಿಂಗಳಿನಲ್ಲಿ ತವರು ಮನೆಗೆ ಬಂದಿದ್ದಳು. ಈ ವೇಳೆ ಪ್ರಿಯತಮ ತಿಪ್ಪೇಸ್ವಾಮಿ ಜೊತೆ ಮನೆಬಿಟ್ಟು ಪರಾರಿಯಾಗಿದ್ದು, ನಂತರ ಇಬ್ಬರು ಒಂದೇ ಮರದಲ್ಲಿ ಒಂದೇ ಸೀರೆಯಡಿಯಲ್ಲಿ ಆತ್ಮಹತ್ಯೆಗೆ ಮಾಡಿಕೊಂಡಿರುವುದು ಬಯಲಿಗೆ ಬಂದಿತ್ತು. ಪೊಲೀಸರು ಸಹ ಈ ಪ್ರಕರಣವನ್ನ ಪ್ರೇಮಿಗಳ ಆತ್ಮಹತ್ಯೆಯೆಂದು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಇದೀಗ ಪ್ರೇಮಿಗಳನ್ನು ಯುವತಿಯ ಪೋಷಕರು ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ್ದಾರೆಂದು ನ್ಯಾಯಾಲಯದಲ್ಲಿ ದೂರು ದಾಖಲು ಮಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅರುಣ್ ರಂಗರಾಜನ್ ಹೇಳಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿಯಲ್ಲೂ ಸಹ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿರುವುದರಿಂದ ಪೊಲೀಸರಿಗೆ ಈ ಪ್ರಕರಣ ಹೊಸ ತಲೆನೋವಾಗಿ ಪರಿಣಮಿಸಿದೆ. ಅಲ್ಲದೇ ಇದೂ ಮರ್ಯಾದೆ ಹತ್ಯೆಯೇ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv