ಮೈಸೂರು: ಮದವೆಗೆ ಮನೆಯವರ ನಿರಾಕರಣೆ ಹಿನ್ನೆಲೆಯಲ್ಲಿ ಪ್ರೇಮಿಗಳು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ಮಹಿಳೆ ಸಾವನ್ನಪ್ಪಿದ್ದು, ಯುವಕ ಅಸ್ವಸ್ಥನಾಗಿರುವ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ಗಾವಡಗೆರೆಯಲ್ಲಿ ನಡೆದಿದೆ.
ಕೆ.ಆರ್. ನಗರ ತಾಲೂಕು ಮದೇನಹಳ್ಳಿ ನಿವಾಸಿ ಜಮುನಾ (28) ಮೃತಪಟ್ಟಿದ್ದಾರೆ. ಹುಣಸೂರು ತಾಲೂಕಿನ ತಿಂಡಾಳು ಗ್ರಾಮದ ದಿಲೀಪ್ (20) ಅಸ್ವಸ್ಥನಾಗಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.
ಜಮುನಾಳಿಗೆ ಈಗಾಗಲೇ ಮದುವೆಯಾಗಿದ್ದು, ಪತಿಯಿಂದ ದೂರವಾಗಿದ್ದಳು. ಆದರೆ ತನಗಿಂತ ವಯಸ್ಸಿನಲ್ಲಿ ಚಿಕ್ಕವನಾದ ದಿಲೀಪ್ ನನ್ನ ಪ್ರೀತಿಸುತ್ತಿದ್ದಳು. ಆತನ ಕೂಡ ಮಹಿಳೆಯನ್ನು ಪ್ರೀತಿ ಮಾಡುತ್ತಿದ್ದ. ಇಬ್ಬರು ಮದುವೆ ಮಾಡಿಕೊಳ್ಳಲು ಮುಂದಾಗಿದ್ದರು. ಆದರೆ ಇವರಿಬ್ಬರ ಪ್ರೀತಿಯ ಬಗ್ಗೆ ಯುವಕನ ಮನೆಯವರಿಗೆ ವಿಷಯ ತಿಳಿದಿದೆ. ನಂತರ ಅವನ ಮನೆಯವರು ಇವರ ಮದುವೆಗೆ ನಿರಾಕರಿಸಿದ್ದಾರೆ.
ಮನೆಯವರು ಮದುವೆಗೆ ಒಪ್ಪದ ಕಾರಣ ಇಂದು ಇಬ್ಬರು ಒಟ್ಟಿಗೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದು, ಜಮುನಾ ಗಾವಡಗೆರೆ ಪೆಟ್ರೋಲ್ ಬಂಕ್ ಹಿಂಭಾಗದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದರೆ ಯುವಕ ವಿಷದ ಕಾಳು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅದೃಷ್ಟವಶಾತ್ ಜನರು ನೋಡಿ ಯುವಕನನ್ನ ಸಮೀಪದ ಕೆ. ಆರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಜಮುನಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.
ಈ ಘಟನೆ ಸಂಬಂದ ಹುಣಸೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯಕ್ಕೆ ಯುವಕ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.