ಚೆನ್ನೈ: ಕುಟುಂಬಸ್ಥರು ಮದುವೆಗೆ ಒಪ್ಪದ ಹಿನ್ನೆಲೆಯಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕೆಲಮಂಗಲಂನಲ್ಲಿ ನಡೆದಿದೆ.
ತಮಿಳುನಾಡಿನ ರಾಮಚಂದ್ರಂ ಗ್ರಾಮದ ಯಲ್ಲೇಶ್ (24) ಮತ್ತು ಜ್ಯೋತಿ (25) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಇವರಿಬ್ಬರು ಒಂದೇ ಗ್ರಾಮದವರಾಗಿದ್ದು, ಯಲ್ಲೇಶ್ ಟ್ರಕ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದನು. ಜ್ಯೋತಿ ಬಿ.ಕಾಂ ಪದವಿ ಮಾಡಿದ್ದಳು. ಇಬ್ಬರು ನೆರೆಹೊರೆಯವರಾಗಿದ್ದರಿಂದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರು ಮದುವೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದ್ದರು.
ಯಲ್ಲೇಶ್ ಮತ್ತು ಜ್ಯೋತಿ ಇಬ್ಬರು ತಮ್ಮ ಪೋಷಕರ ಜೊತೆ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ. ಮೊದಲಿಗೆ ಇಬ್ಬರ ಮನೆಯಲ್ಲಿ ಇವರ ಮದುವೆಗೆ ಒಪ್ಪಲಿಲ್ಲ. ಕೊನೆಗೆ ಜ್ಯೋತಿ ತಂದೆ ಕೃಷ್ಣಪ್ಪ ಮಗಳ ಪ್ರೀತಿಯ ಮದುವೆಗೆ ಒಪ್ಪಿಗೆ ಸೂಚಿಸಿದ್ದರು. ಆದರೆ ಯಲ್ಲೇಶ್ ತಂದೆ ಮುನಿರಾಜ್ ಮಾತ್ರ ವಿವಾಹಕ್ಕೆ ಒಪ್ಪಿಗೆ ಸೂಚಿಸಿಲ್ಲ. ಇದರಿಂದ ನೊಂದ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದು, ಇಬ್ಬರು ಬೈಕಿನಲ್ಲಿ ಕೆಲಮಂಗಲಂಗೆ ಹೋಗಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಅಲ್ಲಿ ರೈಲ್ವೆ ಗೇಟ್ ಬಳಿ ಬೈಕ್ ಪಾರ್ಕ್ ಮಾಡಿ ಇಬ್ಬರು ರೈಲ್ವೆ ಹಳಿಯ ಮೇಲೆ ಕೈ-ಕೈ ಹಿಡಿದುಕೊಂಡು ನಡೆದುಕೊಂಡು ಹೋಗುತ್ತಿದ್ದರು. ತಕ್ಷಣ ಬೆಂಗಳೂರಿನಿಂದ ಸೇಲಂಗೆ ತೆರಳುತ್ತಿದ್ದ ಕುರ್ಲಾ ಎಕ್ಸ್ ಪ್ರೆಸ್ ರೈಲಿನ ಮುಂದೆ ಜಿಗಿದಿದ್ದಾರೆ. ತೀವ್ರವಾಗಿ ಗಾಯಗೊಂಡು ಪ್ರೇಮಿಗಳಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹೊಸೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯಕ್ಕೆ ಈ ಕುರಿತು ಸೇಲಂ ರೈಲ್ವೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.