– ಮನನೊಂದ ಯುವಕ ಎರಡು ದಿನದ ನಂತ್ರ ನೇಣಿಗೆ ಶರಣು
ಚಂಡೀಗಢ್: ಪ್ರೇಯಸಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಕ್ಕೆ ಪೋಷಕರು ನಿಂದಿಸಿದ್ದು, ಇದರಿಂದ ಬೇಸತ್ತ ಯುವಕ ಎರಡು ದಿನದ ನಂತರ ಆತ್ಮಹತ್ಯೆ ಮಾಡಿಕೊಂಡ ಘಟನೆ ಹರಿಯಾಣದ ಜಗಾದ್ರಿಯಲ್ಲಿ ನಡೆದಿದೆ.
ಸುರೇಶ್ ಕುಮಾರ್ (19) ಆತ್ಮಹತ್ಯೆ ಮಾಡಿಕೊಂಡ ಯುವಕ. ಸುರೇಶ್ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುತ್ತಿದ್ದನು. ಅಲ್ಲದೆ ಆಕೆಯನ್ನು ತನ್ನ ಮನೆಗೂ ಕರೆದುಕೊಂಡು ಹೋಗುತ್ತಿದ್ದನು. ಆದರೆ ಇದು ಆತನ ತಾಯಿಗೆ ಇಷ್ಟವಾಗಲಿಲ್ಲ. ಹಾಗಾಗಿ ಅವರು ಸುರೇಶ್‍ಗೆ ಬಾಲಕಿಯನ್ನು ಮನೆಗೆ ಕರೆದುಕೊಂಡು ಬರಬೇಡ ಎಂದು ನಿಂದಿಸಿದ್ದಾರೆ. ಇದರಿಂದ ಬೇಸತ್ತ ಸುರೇಶ್ ಎರಡು ದಿನಗಳ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಬಗ್ಗೆ ಸುರೇಶ್ ಸಹೋದರ ಲಕ್ಷ್ಮಣ್ ಪ್ರತಿಕ್ರಿಯೆ ನೀಡಿ, ನನ್ನ ತಮ್ಮ ಸುರೇಶ್ ಯಾವಾಗಲೂ ಬೈಕ್ ಮೆಕ್ಯಾನಿಕ್ ಜೊತೆ ಇರುತ್ತಿದ್ದನು. ಅಲ್ಲದೆ ಆತ ಅಪ್ರಾಪ್ತೆಯನ್ನು ಪ್ರೀತಿಸುತ್ತಿದ್ದನು. ಸುರೇಶ್, ಬಾಲಕಿಯನ್ನು ಹಲವಾರು ಬಾರಿ ನಮ್ಮ ಮನೆಗೆ ಕರೆದುಕೊಂಡು ಬಂದಿದ್ದಾನೆ. ಈ ವಿಷಯ ನಮ್ಮ ಕುಟುಂಬಸ್ಥರಿಗೆ ತಿಳಿದಾಗ ಆತನಿಗೆ ಬೈದು ಬುದ್ಧಿ ಹೇಳಲಾಗಿತ್ತು. ಜ. 1ರಂದು ನನ್ನ ಪತ್ನಿ ಒಬ್ಬಳೇ ಮನೆಯಲ್ಲಿದ್ದಳು. ಈ ವೇಳೆ ಸುರೇಶ್, ಬಾಲಕಿಯನ್ನು ಮನೆಗೆ ಕರೆದುಕೊಂಡು ಬಂದಿದ್ದನು ಎಂದು ತಿಳಿಸಿದ್ದಾರೆ.
ಈ ವಿಷಯವನ್ನು ನನ್ನ ಪತ್ನಿ ನನ್ನ ತಾಯಿಯ ಬಳಿ ಹೇಳಿದ್ದಳು. ಆಗ ನನ್ನ ತಾಯಿ ಆತನಿಗೆ ಬೈದು ಬುದ್ಧಿ ಹೇಳಿದ್ದರು. ಬಳಿಕ ಸೋಮವಾರ ರಾತ್ರಿ ಸುರೇಶ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಸುರೇಶ್ ಪ್ರೀತಿಸುತ್ತಿದ್ದ ಬಾಲಕಿ 16 ವರ್ಷದವಳಾಗಿದ್ದು, ಇಬ್ಬರು ಈಗಲೇ ಮದುವೆಯಾಗಲು ಸಾಧ್ಯವಿರಲಿಲ್ಲ. ಹಾಗಾಗಿ ಆತನಿಗೆ ಬುದ್ಧಿವಾದ ಹೇಳಲಾಗಿತ್ತು. ಆದರೆ ನನ್ನ ತಮ್ಮ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂದು ನಾವು ಅಂದುಕೊಂಡಿರಲಿಲ್ಲ ಎಂದು ಲಕ್ಷ್ಮಣ್ ಪ್ರತಿಕ್ರಿಯಿಸಿದ್ದಾರೆ.
ಈ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಯುವಕನ ಪೋಷಕರು ಯಾರ ಮೇಲೂ ಆರೋಪ ಮಾಡುತ್ತಿಲ್ಲ. ಅಲ್ಲದೆ ಯುವಕ ಮೃತದೇಹದ ಬಳಿ ಯಾವುದೇ ಡೆತ್‍ನೋಟ್ ಕೂಡ ಪತ್ತೆಯಾಗಿಲ್ಲ. ಹಾಗಾಗಿ ಪೊಲೀಸರು ಮರಣೋತ್ತರ ಪರೀಕ್ಷೆಯ ನಂತರ ಯುವಕನ ಮೃತದೇಹವನ್ನು ಆತನ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.