ಬೆಂಗಳೂರು: ಪತಿಯೊಂದಿಗೆ ದೇವಸ್ಥಾನಕ್ಕೆ ಬಂದಿದ್ದ ಮಹಿಳೆಗೆ ಪಾಗಲ್ ಪ್ರೇಮಿಯೊಬ್ಬ ಯದ್ವಾತದ್ವಾ ಚಾಕುವಿನಿಂದ ಇರಿದ ಘಟನೆ ನಡೆದಿದೆ.
ಈ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಶಿವಗಂಗೆ ಗ್ರಾಮದಲ್ಲಿ ಘಟನೆ ಇಂದು ಮಧ್ಯಾಹ್ನ 2.30ರ ಸುಮಾರಿಗೆ ನಡೆದಿದ್ದು, ಪಾಗಲ್ ಪ್ರೇಮಿಯನ್ನು ಕಂಬಾಳು ಮೂಲದ ಶಶಿ ಎಂದು ಗುರುತಿಸಲಾಗಿದೆ.
ಏನಿದು ಘಟನೆ?
29 ವರ್ಷದ ರತ್ನ ಇಂದು ತನ್ನ ಗಂಡನ ಜೊತೆ ಶಿವಗಂಗೆ ದೇವಾಲಯಕ್ಕೆ ಬಂದಿದ್ದರು. ದೇವಸ್ಥಾನದೊಳಗೆ ಪೂಜೆ ನಡೆಯುತ್ತಿತ್ತು. ಬಂದಿರುವ ಭಕ್ತರೆಲ್ಲರು ಪೂಜೆಯಲ್ಲಿ ಮಗ್ನರಾಗಿದ್ದರು. ಈ ವೇಳೆ ರತ್ನ ಪತಿ ದೇವರಿಗೆ ಮುಡಿ ಕೊಡೋದಕ್ಕೆ ಒಳಗೆ ಹೋಗಿದ್ದರು. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡ ಆರೋಪಿ ಶಶಿ ಏಕಾಏಕಿ ಬಂದು ಚಾಕುವಿನಿಂದ 5, 6 ಬಾರಿ ರತ್ನರಿಗೆ ಇರಿದಿದ್ದಾನೆ. ಪರಿಣಾಮ ರತ್ನರಿಗೆ ಗಂಭೀರ ಗಾಯಗಳಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಸ್ಥಳೀಯರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಅಂತ ಪ್ರತ್ಯಕ್ಷದರ್ಶಿಯೊಬ್ಬರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
ಚಾಕುವಿನಿಂದ ಇರಿದಿದ್ದು ಯಾಕೆ?
ಆರೋಪಿ ಶಶಿ ಕಳೆದ ಮೂರು ವರ್ಷದ ಹಿಂದೆ ರತ್ನರನ್ನು ಪ್ರೀತಿಸುತ್ತಿದ್ದನು. ಆದ್ರೆ ಈತನ ಪ್ರೀತಿಯನ್ನು ರತ್ನ ನಿರಾಕರಿಸಿದ್ದರು. ಅಲ್ಲದೇ ಅವರಿಗೆ ಬೇರೆ ಮದುವೆ ಕೂಡ ಆಗಿತ್ತು. ಇದರಿಂದ ಸಿಟ್ಟುಗೊಂಡಿದ್ದ ಶಶಿ, ರತ್ನ ಅವರು ದೇವಸ್ಥಾನಕ್ಕೆ ಬಂದಿರುವುದನ್ನು ಗಮನಿಸಿ ಹೊಸ ಚಾಕುವಿನೊಂದಿಗೆ ಬಂದು ಇರಿದಿದ್ದಾನೆ.
ಘಟನೆಯ ಬಳಿಕ ಗಂಭೀರ ಸ್ಥೀತಿಯಲ್ಲಿದ್ದ ಮಹಿಳೆಯನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪ್ ಡೇಟ್:
ಪಾಗಲ್ ಪ್ರೇಮಿಯಿಂದ ಚಾಕು ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv