– ಅನೈತಿಕ ಸಂಬಂಧ ಹೊಂದಿದ್ದ 2 ಮಕ್ಕಳ ತಾಯಿ
ಭುವನೇಶ್ವರ: ಮಹಿಳೆಯೊಬ್ಬಳು ತನ್ನ ಪ್ರಿಯಕರನ ಸಹಾಯದಿಂದ ಪತಿಯನ್ನೇ ಕೊಲೆ ಮಾಡಿರುವ ಘಟನೆ ಒಡಿಶಾದ ರಾಯಗಡ ಜಿಲ್ಲೆಯಲ್ಲಿ ನಡೆದಿದೆ.
ಮುನಿಗುಡ ನಿವಾಸಿ ರಾಜ್‍ಕುಮಾರ್ ಕೊಲೆಯಾದ ವ್ಯಕ್ತಿ. ಈತನ ಪತ್ನಿ ನಿವೇದಿತಾ ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಪತಿಯನ್ನೇ ಕೊಲೆ ಮಾಡಿದ್ದಾಳೆ. ಇದೀಗ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಏನಿದು ಪ್ರಕರಣ?
ರಾಜ್‍ಕುಮಾರ್ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಈತ ನಿವೇದಿತಾ ಜೊತೆ ಮದುವೆಯಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. ಆದರೆ ಪತ್ನಿ ನಿವೇದಿತಾ ಅದೇ ಗ್ರಾಮದ ಬೇರೊಬ್ಬನ ಜೊತೆ ತನ್ನ ಪತಿಗೆ ಗೊತ್ತಿಲ್ಲದೇ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಎರಡು ದಿನಗಳ ಹಿಂದೆ ತನ್ನ ಪ್ರಿಯಕರನನ್ನ ಮನೆಗೆ ಕರೆಸಿಕೊಂಡಿದ್ದಳು. ಆದರೆ ಇದೇ ವೇಳೆ ರಾಜ್‍ಕುಮಾರ್ ಮನೆಗೆ ಬಂದಿದ್ದಾನೆ. ಆಗ ತನ್ನ ಪತ್ನಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಬೆಡ್ ಮೇಲೆ ಮಲಗಿರುವುದು ನೋಡಿದ್ದಾನೆ. ಇದರಿಂದ ಕೋಪಗೊಂಡ ರಾಜ್‍ಕುಮಾರ್ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ನಿವೇದಿತಾ ತನ್ನ ಪ್ರಿಯಕರನ ಸಹಾಯ ಪಡೆದ ಆತನ ತಲೆಗೆ ಹೊಡೆದಿದ್ದಾಳೆ.
ರಾಜ್‍ಕುಮಾರ್ ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ನಂತರ ಮೃತದೇಹವನ್ನು ಕಂಬಳಿಯಲ್ಲಿ ಸುತ್ತಿ ಕಾರಿನಲ್ಲಿ ತೆಗೆದುಕೊಂಡು ಹೋಗಿ ರಸ್ತೆ ಬದಿಯಲ್ಲಿ ಬಿಸಾಡಿ ಮನೆಗೆ ವಾಪಸ್ ಬಂದಿದ್ದಾಳೆ. ತಾನೇ ಕೊಲೆ ಮಾಡಿ ಬುಧವಾರ ಮುಂಗಡ ಪೊಲೀಸ್ ಠಾಣೆಗೆ ಹೋಗಿ ಪತಿ ನಾಪತ್ತೆಯಾಗಿದ್ದಾನೆ ಎಂದು ದೂರು ನೀಡಿದ್ದಾಳೆ. ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದರು.
ಆಗ ಪೊಲೀಸರಿಗೆ ರಾಜ್‍ಕುಮಾರ್ ಮೃತದೇಹ ಪತ್ತೆಯಾಗಿದೆ. ಜೊತೆಗೆ ಮೃತದೇಹದ ಬಳಿ ಕೆಲವು ಸಾಕ್ಷ್ಯಗಳು ಪತ್ತೆಯಾಗಿವೆ. ನಂತರ ಆ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ಪತ್ನಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿದ್ದಾರೆ. ಆಗ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಸದ್ಯಕ್ಕೆ ಪೊಲೀಸರು ನಿವೇದಿತಾ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.