– 1.5 ಲಕ್ಷದ ಬೈಕ್ ಕದ್ದು ಸ್ನೇಹಿತನ ಜೊತೆ ಸಿಕ್ಕಿಬಿದ್ದ
– ಪ್ರೇಯಸಿ ಹೀಯಾಳಿಸಿದ್ದಕ್ಕೆ ನೊಂದ ಯುವಕ
ನವದೆಹಲಿ: ಗೆಳತಿ ನಿನ್ನ ಬಳಿ ಬೈಕ್ ಇಲ್ಲವೆಂದು ವ್ಯಂಗ್ಯ ಮಾಡಿದ ನಂತರ ಪ್ರಿಯಕರ ಎಂಟು ಬೈಕ್‍ಗಳನ್ನು ಕಳ್ಳತನ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಲಲಿತ್ ಬಂಧಿತ ಆರೋಪಿ. ಈತ ಪ್ರೇಮಿಗಳ ದಿನಾಚರಣೆಯಂದು ಗೆಳತಿಯನ್ನು ಭೇಟಿ ಮಾಡಿದ್ದಾನೆ. ಈ ವೇಳೆ ಆಕೆ ನಿನ್ನ ಬಳಿ ಒಂದು ಬೈಕ್ ಇಲ್ಲ ಎಂದು ವ್ಯಂಗ್ಯ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಲಲಿತ್ ತನ್ನ ಸ್ನೇಹಿತ ಸಾಹೀದ್ ಜೊತೆ ಸೇರಿಕೊಂಡು ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಲು ಪ್ಲಾನ್ ಮಾಡಿದ್ದಾನೆ. ಅದರಂತೆಯೇ ಬೈಕ್ ಕಳ್ಳತನ ಮಾಡಲು ಶುರು ಮಾಡಿದ್ದಾರೆ. ನಂತರ ಆಟೋನೂ ಕಳ್ಳತನ ಮಾಡಲು ಶುರು ಮಾಡಿದ್ದರು.
ದಿನದಿಂದ ದಿನಕ್ಕೆ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿದ್ದವು. ತಕ್ಷಣ ಎಚ್ಚೆತ್ತ ಪೊಲೀಸರು ಆರೋಪಿಗಳ ಹುಡುಕಾಟ ಶುರು ಮಾಡಿದ್ದರು. ಮಾರ್ಚ್ 6 ರಂದು ಪೊಲೀಸ್ ತಂಡಕ್ಕೆ ಅನುಮಾನಾಸ್ಪದವಾಗಿ ಇಬ್ಬರು ದ್ವಾರಕಾ ಪ್ರದೇಶದಲ್ಲಿ ಓಡಾಡುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ನಂತರ ಪೊಲೀಸರು ಮಾಹಿತಿಯ ಮೇರೆಗೆ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ್ದಾರೆ. ಆಗ ಇಬ್ಬರು ಶಂಕಿತರು 1.8 ಲಕ್ಷ ರೂ.ಗಳ ಮೌಲ್ಯದ ಬೈಕ್‍ನಲ್ಲಿ ಸುತ್ತಾಡುತ್ತಿರುವುದು ಕಂಡುಬಂದಿದೆ.
ಅಲ್ಲದೇ ಆ ಬೈಕ್‍ಗೆ ನಂಬರ್ ಪ್ಲೇಟ್ ಸಹ ಇರಲಿಲ್ಲ. ನಂತರ ಪೊಲೀಸರು ಅವರಿಬ್ಬರನ್ನು ಹಿಡಿದು ಬೈಕ್ ದಾಖಲಾತಿಯನ್ನು ಕೇಳಿದ್ದಾರೆ. ಆಗ ಅದು ಕದ್ದ ಬೈಕ್ ಎಂದು ತಿಳಿದುಬಂದಿದೆ. ಈ ದುಬಾರಿ ಬೈಕ್ ಫೆಬ್ರವರಿ 21 ರಂದು ದೆಹಲಿಯ ಬಿಂದಾಪುರದಿಂದ ಕಳ್ಳತನ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ತಕ್ಷಣ ಇಬ್ಬರನ್ನು ಪೊಲೀಸರು ಬಂಧಿಸಿ ವಿಚಾರಣೆ ಮಾಡಿದ್ದಾರೆ. ಆಗ ಆರೋಪಿಗಳು ತಾವೇ ಕಳ್ಳತನ ಮಾಡಿದ್ದು ಎಂದು ತಪ್ಪೊಪ್ಪಿಕೊಂಡಿದ್ದಾರೆ.
ಆರೋಪಿ ಲಲಿತ್ ಬಿಹಾರದ ನಿವಾಸಿಯಾಗಿದ್ದು, ತನ್ನ ಪ್ರೇಯಸಿಯನ್ನು ಮೆಚ್ಚಿಸಲು ಯಾವಾಗಲೂ ಪಾರ್ಟಿ ಮಾಡುತ್ತಿದ್ದನು. ಆದರೆ ಕಳೆದ ಪ್ರೇಮಿಗಳ ದಿನದಂದು ಅವನ ಗೆಳತಿ ಬೈಕ್ ಹೊಂದಿಲ್ಲವೆಂದು ಹೀಯಾಳಿಸಿದ್ದಾಳೆ. ಇದರಿಂದ ನೊಂದು ಅನೇಕ ಬೈಕ್‍ಗಳನ್ನು ಹೊಂದಿದ್ದೇನೆ ಎಂದು ಪ್ರೇಯಸಿಗೆ ತೋರಿಸಲು ಕಳ್ಳತನ ಶುರು ಮಾಡಿದ್ದಾನೆ. ನಂತರ ಸ್ನೇಹಿತನ ಜೊತೆ ಸೇರಿಕೊಂಡು ಏಳು ಬೈಕ್ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಎಂಟನೇ ಬೈಕ್ ಕದ್ದು ಪರಾರಿಯಾಗುತ್ತಿದ್ದಾಗ ಇಬ್ಬರು ಸಿಕ್ಕಿಬಿದ್ದಿದ್ದಾರೆ. ಇದೀಗ ಪೊಲೀಸರು ಇಬ್ಬರ ವಿರುದ್ಧ ಬೈಕ್ ಮತ್ತು ಆಟೋ ಕಳ್ಳತನ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.